ಸಾರಾಂಶ
ಕಾರವಾರ: ಗ್ರಾಮ ಆಡಳಿತದ ಆಧಾರಸ್ತಂಭವಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರೊಂದಿಗೆ ಪರಸ್ಪರ ಸಹಕಾರ ಮನೋಭಾವನೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮಡಳಿತ ಅಧಿಕಾರಿಗಳ ಕೇಂದ್ರ ಸಂಘ, ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ಸಹಯೋಗದೊಂದಿಗೆ ಶನಿವಾರ ನಡೆದ 2025ನೇ ಸಾಲಿನ ದಿನಚರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಟುಂಬದಂತೆ ಇದ್ದು, ಎಲ್ಲ ಅಧಿಕಾರಿಗಳು, ಸಿಬ್ಬಂದಿ ತಮ್ಮವರು ಎಂದು ಭಾವಿಸಿದಾಗ ಜಿಲ್ಲೆಯ ಎಲ್ಲ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಎಂದರು.ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕೆಲಸವನ್ನು ಪ್ರಮಾಣಿಕವಾಗಿ ನಿರ್ವಹಿಸಿದರೆ ಸಾರ್ವಜನಿಕರ ಗೌರವಕ್ಕೂ ಅರ್ಹರಾಗುವುದರ ಜತೆಗೆ ತಮ್ಮ ಮೇಲೆ ಇರುವ ಗೌರವವು ಹೆಚ್ಚಾಗಲಿದ್ದು, ಈ ನಿಟ್ಟಿನಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೇ ಎಲ್ಲರೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ಮನಸ್ಸಿನ ಭಾವನೆಗಳಿಗೆ ಪರ್ಯಾಯವಾದದ್ದು ದಿನಚರಿಯಾಗಿದೆ. ದಿನಚರಿಗೆ ಅದರದೇ ಆದ ಮಹತ್ವ ಇದೆ. ಪ್ರತಿನಿತ್ಯದ ಹವ್ಯಾಸಗಳನ್ನು ಬರೆದಿಡುವುದರಿಂದ ದೈನಂದಿನ ಚಟುವಟಿಕೆಗೆ, ಕೆಲಸ ಕಾರ್ಯಕ್ಕೆ ಪ್ರೇರಣೆ ನೀಡುವಂತಾಗಿದೆ. ದಿನಚರಿಯಲ್ಲಿ ಗ್ರಾಮಡಳಿತದ ಸೆಕ್ಷನ್‌ಗಳನ್ನು ಒಳಗೊಂಡಿರುವುದರಿಂದ ಗ್ರಾಮಡಳಿತ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.ಗ್ರಾಮ ಆಡಳಿತಾಧಿಕಾರಿಗಳು ಶ್ರದ್ಧೆ, ನಿಷ್ಠೆ ಪ್ರಾಮಾಣಿಕತೆಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರವನ್ನು ಕೊಡುವಂತಾಗಬೇಕು ಎಂದರು.ಉಪ ವಿಭಾಗಾಧಿಕಾರಿ ಕನಿಷ್ಕ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನಾಯ್ಕ, ತಹಸೀಲ್ದಾರ ನಿಶ್ಚಲ್ ನೊರೊನ್ಹಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಚಾಂದ್ ಬಾಷಾ ಮುಲ್ಲಾ ಇದ್ದರು.ಕರ ವಸೂಲಿ ಶೇ. 100 ಪ್ರಗತಿಯಾಗಲಿ: ಜಿಪಂ ಸಿಇಒ ಈಶ್ವರಕುಮಾರ ಕಾಂದೂ
ಕಾರವಾರ: ಗ್ರಾಪಂ ಮಟ್ಟದ ಕರ ವಸೂಲಾತಿಯಲ್ಲಿ ತಾಲೂಕುಗಳ ಪ್ರಗತಿ ಉತ್ತಮವಾಗಿದ್ದು, ಒಟ್ಟೂ ಕರ ಸಂಗ್ರಹದಲ್ಲಿ 100ಕ್ಕೆ 100ರಷ್ಟು ಪ್ರಗತಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಸೂಚಿಸಿದರು.ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಸಂಬಂಧಿಸಿದಂತೆ ಕಡಿಮೆ ಮಾನವ ದಿನ ಸೃಜಿಸಿದ ಗ್ರಾಪಂಗಳು ಫೆಬ್ರವರಿ ತಿಂಗಳ ಒಳಗೆ ಗುರಿ ಸಾಧಿಸಬೇಕು ಎಂದರು.ಕಾಮಗಾರಿ ಪೂರ್ಣಗೊಳಿಸುವಿಕೆ, ಕಡತ ಪರಿಶೀಲನೆ, ಜಿಯೋ ಟ್ಯಾಗ್, ಸಾಮಾಜಿಕ ಲೆಕ್ಕ ಪರಿಶೋಧನೆ, ಎಂಡ್ ಟು ಎಂಡ್ ಸಾಫ್ಟ್‌ವೇರ್‌ನಲ್ಲಿ ವಾರ್ಷಿಕ ಕ್ರಿಯಾಯೋಜನೆ ಸಲ್ಲಿಸುವುದು, ಬೂದು ನೀರು ನಿರ್ವಹಣೆ ಕಾಮಗಾರಿ ಸೇರಿದಂತೆ ವಿವಿಧ ಅಂಶಗಳ ಪ್ರಗತಿ ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಕೂಸಿನ ಮನೆ, ನಲ್ ಜಲ್ ಮಿತ್ರ, 15ನೇ ಹಣಕಾಸು, ಇ ಹಾಜರಾತಿ, ಸಂಜೀವಿನಿ ಎನ್‌ಆರ್‌ಎಲ್ಎಂ, ಸ್ವಚ್ಛ ಭಾರತ ಮಿಷನ್, ವಸತಿ, ಹಣಕಾಸು, ಜಲಜೀವನ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಯೋಜನಾ ನಿರ್ದೇಶಕ ಕರೀಂ ಅಸದಿ, ಮುಖ್ಯ ಲೆಕ್ಕಾಧಿಕಾರಿ ಆನಂದ ಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ ಮೊದಲಾದವರು ಇದ್ದರು.