ವಾರ್ಡ್ ಹಾಗೂ ಗ್ರಾಮವಾರು ಗ್ಯಾರಂಟಿ ಸಮಿತಿ ಸದಸ್ಯರು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳು ಸೂಕ್ತ ಸಹಕಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಗದಗ

ವಾರ್ಡ್ ಹಾಗೂ ಗ್ರಾಮವಾರು ಗ್ಯಾರಂಟಿ ಸಮಿತಿ ಸದಸ್ಯರು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳು ಸೂಕ್ತ ಸಹಕಾರ ನೀಡಬೇಕು. ಅರ್ಹರಿಗೆ ಸಕಾಲದಲ್ಲಿ ಸೌಲಭ್ಯ ತಲುಪಿಸಿ ಶೇ. 100ರಷ್ಟು ಪ್ರಗತಿ ಸಾಧಿಸಲು ಕೈಜೋಡಿಸಬೇಕು ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಸೂಚಿಸಿದರು.

ನಗರದ ಜಿಪಂ ವಿಸಿ ಹಾಲ್‌ನಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋಟುಮಚಗಿ, ಹೊಂಬಳ, ಬೆಟಗೇರಿ ಸೇರಿ ವಿವಿಧ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರು, ಆಸನ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಬೆಟಗೇರಿ ಬಸ್ ನಿಲ್ದಾಣದಲ್ಲಿರುವ ಟಿಸಿಯನ್ನು ತಕ್ಷಣ ಸ್ಥಳಾಂತರಿಸಬೇಕು. ಮನೆ ಮನೆಗೆ ತೆರಳಿ ಗೃಹಲಕ್ಷ್ಮೀ ಸರ್ವೆ ಚುರುಕುಗೊಳಿಸಿ ಹಣ ದುರುಪಯೋಗವಾಗದಂತೆ ನಿಗಾ ವಹಿಸಬೇಕು. ಪಡಿತರ ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಕಳ್ಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟವಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಯುವನಿಧಿ ಯೋಜನೆಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿ, ಶಕ್ತಿ ಯೋಜನೆಯಡಿ 11-6-2023ರಿಂದ 12-11-2026 ರವರೆಗೆ ಗದಗ ಘಟಕದಲ್ಲಿ ಮಹಿಳಾ ಪ್ರಯಾಣಿಕರಿಂದ ₹1173194 ಲಕ್ಷ ಹಾಗೂ ಬೆಟಗೇರಿ ಘಟಕದಲ್ಲಿ ₹6886.07 ಲಕ್ಷ ಆದಾಯ ಸಂಗ್ರಹವಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಜುಲೈ 2026 ರವರೆಗೆ ನೋಂದಾಯಿತ 84218 ಅರ್ಜಿಗಳ ಪೈಕಿ 78484 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗಿದೆ.

ಅಕ್ಟೋಬರ್ ಅಂತ್ಯದವರೆಗೆ ಗೃಹಜ್ಯೋತಿ ಯೋಜನೆಯಡಿ ಗದಗ ಶಹರದಲ್ಲಿ ಅರ್ಹ 46608 ಸ್ಥಾವರಗಳ ಪೈಕಿ 46310 (ಶೇ. 99.36) ಹಾಗೂ ಗ್ರಾಮೀಣ ವಿಭಾಗದಲ್ಲಿ 53339 ಸ್ಥಾವರಗಳ ಪೈಕಿ 53134 (ಶೇ. 99.62) ಸ್ಥಾವರಗಳು ನೋಂದಣಿಯಾಗಿವೆ. ಅನ್ನಭಾಗ್ಯ ಯೋಜನೆಯಡಿ ಅಕ್ಟೋಬರ್ ಮಾಹೆಯಲ್ಲಿ ಕೇಂದ್ರದ ಎನ್‌ಎಸ್‌ಎಫ್‌ಎ ಅಕ್ಕಿ ಹಂಚಿಕೆಯಡಿ ಶಹರದ 32659 ಕಾರ್ಡುದಾರರಿಗೆ 2252.96 ಕ್ವಿಂಟಲ್, ಗ್ರಾಮೀಣ ಭಾಗದ 48404 ಕಾರ್ಡುದಾರರಿಗೆ 3580.72 ಕ್ವಿಂಟಲ್ ಅಕ್ಕಿ ವಿತರಿಸಿದ್ದು, ರಾಜ್ಯದ ಅನ್ನಭಾಗ್ಯ ಯೋಜನೆಯಡಿ ಕ್ರಮವಾಗಿ 5364.35 ಕ್ವಿಂಟಲ್ ಹಾಗೂ 7527.55 ಕ್ವಿಂಟಲ್ ಅಕ್ಕಿ ಹಂಚಲಾಗಿದೆ. ಯುವನಿಧಿಯಡಿ ಆಗಸ್ಟ್ 2026 ರವರೆಗೆ ನೋಂದಾಯಿತ 3593 ಅಭ್ಯರ್ಥಿಗಳ ಪೈಕಿ 3157 ಮಂದಿಗೆ ಹಣ ವರ್ಗಾವಣೆಯಾಗಿದ್ದು, ಬಾಕಿ 436 ಅಭ್ಯರ್ಥಿಗಳು ಹಂತ ಹಂತವಾಗಿ ಅರ್ಹರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷೆ ನೀಲಮ್ಮ ಬೋಳಣ್ಣವರ, ತಾಪಂ ಇಒ ಡಾ. ಎಚ್.ಎಸ್. ಜಿನಗ, ತಾಲೂಕು ಸಮಿತಿ ಸದಸ್ಯರಾದ ಶರೀಫ್ ಬಿಳೆಯಲಿ, ಶಂಭು ಕಾಳೆ, ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ಮಲ್ಲಪ್ಪ ದಂಡಿನ, ಮಲ್ಲಪ್ಪ ಬಾರಕೇರ, ಸಾವಿತ್ರಿ ಹೂಗಾರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.