ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸಬೇಡಿ

| Published : Aug 10 2025, 01:30 AM IST

ಅಧಿಕಾರಿಗಳು ಸಾರ್ವಜನಿಕರನ್ನು ಅಲೆದಾಡಿಸಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಅಧಿಕಾರಿಗಳು ಸಣ್ಣಪುಟ್ಟ ಕೆಲಸಗಳಿಗೆ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ. ಆ ರೀತಿ ಏನಾದರೂ ಜನರನ್ನು ಸುಮ್ಮನೆ ಅಲೆದಾಡಿಸಿದರೆ ಗಂಭೀರವಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ಎಚ್ಚರಿಕೆ ನೀಡಿದರು.

ಚನ್ನಪಟ್ಟಣ: ಅಧಿಕಾರಿಗಳು ಸಣ್ಣಪುಟ್ಟ ಕೆಲಸಗಳಿಗೆ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ. ಆ ರೀತಿ ಏನಾದರೂ ಜನರನ್ನು ಸುಮ್ಮನೆ ಅಲೆದಾಡಿಸಿದರೆ ಗಂಭೀರವಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ಎಚ್ಚರಿಕೆ ನೀಡಿದರು.

ನಗರದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಇರುವುದೇ ಸಾರ್ವಜನಿಕ ಸೇವೆಗಾಗಿ ಅಧಿಕಾರಿಗಳು ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿ. ಇಲ್ಲವಾದರೆ, ನಮ್ಮ ಕೆಲಸ ನಾವು ಮಾಡಬೇಕಾಗುತ್ತದೆ ಎಂದರು.

ಈ ಸಭೆಗೆ ಬರುವ ಅರ್ಜಿಗಳನ್ನು ನಾವು ಸ್ಥಳದಲ್ಲೇ ಬಗೆಹರಿಸುತ್ತೇವೆ ಎನ್ನುವುದಿಲ್ಲ. ಈ ಅರ್ಜಿಗಳನ್ನು ಕಾಲ ಮಿತಿಯಲ್ಲಿ ಬಗೆಹರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ನಮ್ಮ ಬಳಿ ಬರುವ ದೂರಾರ್ಜಿಗಳನ್ನು ನಿರ್ಲಕ್ಷ್ಯ ಮಾಡಿದರೆ, ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸರಿಯಾದ ಕ್ರಮದಲ್ಲಿ ದೂರು ನೀಡಿ: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಪ್ರತಿ ತಾಲೂಕುಗಳಲ್ಲಿ ಸಭೆ ನಡೆಸುತ್ತೇವೆ. ಸಾರ್ವಜನಿಕರು ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ದೂರು ಸಲ್ಲಿಸಿ. ಲಂಚ ಪಡೆಯುತ್ತಾರೆ ಎಂದು ಸುಮ್ಮನೆ ಬಾಯಿ ಮಾತಿನಲ್ಲಿ ಹೇಳಿದರೆ ಅದಕ್ಕೆ ಅರ್ಥವಿರುವುದಿಲ್ಲ. ಯಾವುದಾದರೂ ಸಿಬ್ಬಂದಿ ಅಥವಾ ಅಧಿಕಾರಿ ನಿಮ್ಮ ಕೆಲಸ ಮಾಡಿಕೊಡಲು ಹಣಕ್ಕೆ ಒತ್ತಾಯಿಸಿದರೆ, ನಮ್ಮ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಥವಾ ಕಚೇರಿಗೆ ಖುದ್ದಾಗಿ ಬಂದು ದೂರು ದಾಖಲಿಸಿ ಎಂದರು.

ಲೋಕಾಯುಕ್ತ ಡಿವೈಎಸ್‌ಪಿ ರಾಜೇಶ್ ಮಾತನಾಡಿ, ನಮಗೆ ಬರುವ ಬಹುತೇಕ ದೂರುಗಳು ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂಬುದಾಗಿದೆ. ಸಾರ್ವಜನಿಕರು ಕೇಳುವ ಮಾಹಿತಿಗಳನ್ನು ನೀಡಲು ಇರುವ ಸಮಸ್ಯೆಯೇನು ಎಂದು ಪ್ರಶ್ನಿಸಿದರು.

ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತಕ್ಕೆ ಸಂಬಂಧಿಸಿದ ಮಾಹಿತಿ ಫಲಕಗಳಿಲ್ಲ. ಪ್ರತಿ ಕಚೇರಿಯಲ್ಲೂ ಇಲಾಖೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಸಹಿತ ಬೋರ್ಡ್ ಅಳವಡಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ 13ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. ಎಲ್ಲಾ ದೂರುಗಳ ಬಗ್ಗೆ ಲೋಕಾ ಅಧಿಕಾರಿಗಳು ಚರ್ಚೆ ನಡೆಸಿದರು. ಈ ವೇಳೆ ಡಿವೈಎಸ್ಪಿಗಳಾದ ರಾಜೇಶ್, ಶಿವಪ್ರಸಾದ್, ಸಿಪಿಐ ಸಂದೀಪ್, ತಹಸೀಲ್ದಾರ್ ಗಿರೀಶ್, ತಾಪಂ ಇಒ ಉಪಸ್ಥಿತರಿದ್ದರು.

ಪೊಟೋ೮ಸಿಪಿಟಿ೧:

ಚನ್ನಪಟ್ಪಣದ ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆ ನಡೆಯಿತು.