ಸಾರಾಂಶ
ಬ್ಯಾಡಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಯನ್ನು ದೇಶದ ಎಲ್ಲ ವರ್ಗದ ಬಡ ಕೂಲಿ ಕಾರ್ಮಿಕರಿಗಾಗಿ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸುವಂತೆ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಸಲಹೆ ನೀಡಿದರು.
ಜಿಪಂ, ತಾಪಂ, ಗ್ರಾಮ ಸ್ವರಾಜ್ ಅಭಿಯಾನ ಹಾಗೂ ರಾಣಿಬೆನ್ನೂರಿನ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ನರೇಗಾ ಕಾಯಕ ಬಂಧುಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸೌಲಭ್ಯ ಪಡೆದು, ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ. ಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸಿರುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಆಡಳಿದಲ್ಲಿದ್ದಾಗ ಜಾರಿಗೊಳಿಸಿದ್ದನ್ನು ಸ್ಮರಿಸಬೇಕಾಗುತ್ತದೆ ಎಂದರು.
ನರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಕರೆ, ನೀರುಗಾಲುವೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ರೈತರ ಆರ್ಥಿಕ ಬಲ ಹೆಚ್ಚಿಸಲು ಯೋಜನೆ ಸಹಕಾರಿಯಾಗಿದೆ. ಹೀಗಾಗಿ ತರಬೇತಿ ಪಡೆದ ಕಾಯಕ ಬಂಧುಗಳು ಗ್ರಾಮದಲ್ಲಿ ನರೇಗಾ ಕಾರ್ಮಿಕರೊಂದಿಗೆ ಅಭಿವೃದ್ಧಿ ಕಾಮಗಾರಿ ನಡೆಯಲು ಸಹಕರಿಸಬೇಕು ಎಂದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಮಾತನಾಡಿ, ತಾಲೂಕಿನ 21 ಗ್ರಾಮ ಪಂಚಾಯಿತಿಯ 279 ಕಾಯಕ ಬಂಧುಗಳಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಕಾಯಕ ಬಂಧುಗಳು ನರೇಗಾ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ, ಗ್ರಾಮಾಭಿವೃದ್ಧಿಗೆ ಕೈಜೋಡಿಸಬೇಕು, ತಾಲೂಕಿನಲ್ಲಿ ಕೃಷಿ, ತೋಟಗಾರಿಕೆ ಮುಂತಾದ ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕೊಲಿ ಕಾರ್ಮಿಕರ ಕುಂದು ಕೊರತೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಎಸ್.ಡಿ. ಬಳಿಗಾರ, ಮುಖಂಡರಾದ ಸುರೇಶ ಹುಳಬುತ್ತಿ, ತಾಲೂಕ ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕರಾದ ಪರಶುರಾಮ ಅಗನಸಹಳ್ಳಿ, ತಾಲೂಕು ಐಇಸಿ ಸಂಯೋಜಕರಾದ ಅಕ್ಷಯ ದೇಶಪಾಂಡೆ, ತಾಂತ್ರಿಕ ಸಂಯೋಜಕರಾದ ಸಂತೋಷ್ ನಾಯಕ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್ ಬಿದರಿ, ದಾದಾಪಪೀರ್ ತಿಳವಳ್ಳಿ ಶೃತಿ ಅಂಗರಗಟ್ಟಿ, ಫಕ್ಕೀರಮ್ಮ ವಡ್ಡರ ಇತರರಿದ್ದರು.