ತಾಲೂಕಿನ ನಿಡಗಲ್ ಹೋಬಳಿ ವ್ಯಾಪ್ತಿಯ ಮಂಗಳವಾಡ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮೂರನೇ ಪ್ರಜಾಸೇವಾ ಅಭಿಯಾನದಲ್ಲಿ ಶಾಸಕ, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ನಿಡಗಲ್ ಹೋಬಳಿ ವ್ಯಾಪ್ತಿಯ ಮಂಗಳವಾಡ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮೂರನೇ ಪ್ರಜಾಸೇವಾ ಅಭಿಯಾನದಲ್ಲಿ ಶಾಸಕ, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹಾರ ಒದಗಿಸುವುದೇ ಈ ಪ್ರಜಾಸೇವಾ ಅಭಿಯಾನದ ಮುಖ್ಯ ಉದ್ದೇಶ. ಈಗಾಗಲೇ ಎರಡು ಹಂತಗಳಲ್ಲಿ ನೂರಾರು ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ಇಂದು ಮೂರನೇ ಹಂತದಲ್ಲಿ ಮಂಗಳವಾಡ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ. ಅಧಿಕಾರಿಗಳು ಕೂಡ ಜನಪರವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು, ಪಿಂಚಣಿ, ಪಹಣಿ, ಮನೆ, ರಸ್ತೆ ಸೇರಿದಂತೆ ಜನರು ಸಲ್ಲಿಸಿದ ವಿವಿಧ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು, ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಮೂಲಕ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಗರ್ಭಿಣಿಯರಿಗೆ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿ ಶಾಸಕರು ಆಶೀರ್ವದಿಸಿದರು. ಬಳಿಕ ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರವಿ ವೈ., ತಾ.ಪಂ. ಇ.ಒ. ಮಧುಸೂದನ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್, ತಾ.ಪಂ. ಸಹಾಯಕ ನಿರ್ದೇಶಕ ಮಾರುತಿ ಪ್ರಸಾದ್, ಸ್ಥಳೀಯ ಮುಖಂಡರಾದ ಡಿ.ಮಂಜುನಾಥ್, ಎಂ.ಎಲ್.ಗೋಪಿ, ವೀರಭದ್ರಪ್ಪ, ಕರಿಯಣ್ಣ, ವಾಗೀಶ್, ಚಿಕ್ಕಣ್ಣ, ಪುಟ್ಟಣ್ಣ, ನಾಗರಾಜು, ಕೆ.ಎಚ್.ಪ್ರಕಾಶ್, ಮೂಡಲಗಿರಿಯಪ್ಪ, ಸಿದ್ದೇಶ್, ಮಂಜುನಾಥ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.