ಚರ್ಮರೋಗ ಕಾಣಿಸಿಕೊಂಡ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಜಾಲಿಹುಡಾ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನಕಗಿರಿ: ಚರ್ಮರೋಗ ಕಾಣಿಸಿಕೊಂಡ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಜಾಲಿಹುಡಾ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದಲ್ಲಿರುವ ಎರಡು ಬೋರ್‌ವೆಲ್ ಗಳ ಪೈಕಿ ಚಿಕ್ಕಮಾದಿನಾಳ ರಸ್ತೆಯಲ್ಲಿನ ಬೋರ್‌ವೆಲ್ ತಿಪ್ಪೆಗುಂಡಿಯಲ್ಲಿದ್ದು, ಈ ನೀರಿನಿಂದಲೇ ಚರ್ಮರೋಗಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿತ್ತು. ಚರ್ಮ ರೋಗದ ಕುರಿತಾಗಿ ಫೆ. ೨ರಂದು "ಕನ್ನಡಪ್ರಭ " "ಚರ್ಮರೋಗಕ್ಕೆ ಆತಂಕಗೊಂಡ ಗ್ರಾಮಸ್ಥರು " ಎನ್ನುವ ಶಿರ್ಷಿಕೆಯಡಿ ವಿಸ್ತೃತ ವರದಿ ಸುದ್ದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡಿರುವ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ, ಗ್ರಾಪಂ ಆಡಳಿತಾಧಿಕಾರಿ ವಿರೂಪಾಕ್ಷಿ, ಪಿಡಿಒ ಬಸವರಾಜ ಸಂಕನಾಳ ಜಂಟಿಯಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.

ಈ ಬೋರ್‌ವೆಲ್ ಇರುವ ಪ್ರದೇಶ ಮೊದಲು ತಗ್ಗು ಪ್ರದೇಶವಾಗಿತ್ತು. ಇದೀಗ ಸಮತಟ್ಟಾಗಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದಕ್ಕಾಗಿ ಬಳಕೆಗೆ ಮಾತ್ರ ಉಪಯೋಗಿಸುತ್ತಿದ್ದೇವು. ಆದರೆ, ಗ್ರಾಮದ ಹಲವರಲ್ಲಿ ಚರ್ಮರೋಗ ಕಾಣಿಸಿಕೊಂಡಿದ್ದು, ಈ ನೀರಿನ ಬಳಕೆಯಿಂದಲೇ ಎನ್ನುವ ಅನುಮಾನವಿದ್ದು, ಕೂಡಲೇ ಈ ನೀರಿನ ಪರೀಕ್ಷೆ ನಡೆಸಬೇಕು ಎಂದು ಕನಕಪ್ಪ ಮಮ್ಮಳಿ, ರೈತ ಮುಖಂಡ ನಿಂಗಪ್ಪ ಅಧಿಕಾರಿಗಳ ಗಮನಕ್ಕೆ ತಂದರು.

ಈ ಬೋರವೆಲ್ ನೀರು ಬಳಕೆಗೆ ಯೋಗ್ಯ ಇದೆಯೋ ಇಲ್ಲವೋ ಎನ್ನುವುದನ್ನು ಕೂಡಲೇ ತಪಾಸಣೆ ಮಾಡಿಸುವಂತೆ ಪಿಡಿಒ ಬಸವರಾಜ ಸಂಕನಾಳರಿಗೆ ತಹಸೀಲ್ದಾರ್ ಸೂಚಿಸಿದರು.

ಚರ್ಮರೋಗದ ತಪಾಸಣೆ:

ಚರ್ಮರೋಗ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ತಾಲೂಕಿನ ಮುಸಲಾಪೂರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಚರ್ಮರೋಗದ ಕುರಿತು ತಪಾಷಣೆ ನಡೆಸಿದರು. ನೀರು, ಅನೈರ್ಮಲ್ಯ, ಆಹಾರದಿಂದಲೂ ಈ ರೀತಿಯ ಚರ್ಮರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಹಸೀಲ್ದಾರ್‌ಗೆ ತಿಳಿಸಿದರು.