ಚುನಾವಣಾ ಚೆಕ್‌ಪೋಸ್ಟ್‌ ಗಳಿಗೆ ಅಧಿಕಾರಿಗಳ ಭೇಟಿ

| Published : Mar 18 2024, 01:46 AM IST

ಸಾರಾಂಶ

ಅರ್ಧನಾರೀಪುರ ಚೆಕ್‌ಪೋಸ್ಟ್‌ ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಎಸ್ಪಿ ಪದ್ಮಿನಿ ಸಾಹೋ, ತಹಸಿಲ್ದಾರ್‌ ಭೇಟಿ ಬಿಗಿ ಭದ್ರತೆ ಪರಿಶೀಲನೆ

ಕನ್ನಡಪ್ರಭ ವಾರ್ತೆ ಹನೂರು

ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮತ್ತು ಅಂತಾರಾಜ್ಯ ಗಡಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಜಿಲ್ಲಾಧಿಕಾರಿ ಶಿಲ್ಪ ನಾಗ್‌ ಎಸ್ಪಿ ಪದ್ಮಿನಿ ಸಾಹೋ ಭಾನುವಾರ ತಾಲೂಕಿನ ಅರ್ಧನಾರೀಪುರ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚುನಾವಣಾ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಅಧಿಕಾರಿ ಮತ್ತು ಸಿಬ್ಬಂದಿಯನ್ನು 3 ಪಾಳಿಯಲ್ಲಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ತಿಳಿಸಿದರು. ಈಗಾಗಲೇ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲಿದ್ದು, ನೇಮಕವಾಗಿರುವ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರು ಬರುವಂತಹ ವಾಹನಗಳನ್ನು ತಪಾಸಣೆ ಮಾಡಿ ಬಿಡುವಂತೆ ಸೂಚನೆ ನೀಡಿದರು ಇದೇ ವೇಳೆ ಎಸ್ಪಿ ಪದ್ಮಿನಿ ಸಾಹೋ, ತಹಸೀಲ್ದಾರ್‌ ಗುರುಪ್ರಸಾದ್, ಇನ್ಸ್ ಪೆಕ್ಟರ್‌ ಶಶಿಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕೊಕ್ಕಬೋರೆಯಲ್ಲಿ ಹೊಸ ಮತಗಟ್ಟೆ

ಹನೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು. ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏ. 24 ರಂದು ಮತದಾನ ನಡೆಯಲಿದೆ. ಚುನಾವಣೆ ಪ್ರಕ್ರಿಯೆ 2024ರ ಜೂ.6ಕ್ಕೆ ಮುಕ್ತಾಯವಾಗಲಿದ್ದು, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 254 ಮತಗಟ್ಟೆಗಳಿದ್ದು , ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕೊಕ್ಕಬೋರೆ ಗ್ರಾಮದಲ್ಲಿ ಒಂದು ಹೊಸ ಮತಗಟ್ಟೆ ತೆರೆಯಲಾಗುತ್ತದೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು 1,12,343 ಮಹಿಳೆಯರು 1,11,239 ಹಾಗೂ ಇತರೆ 10 ಸೇರಿದಂತೆ ಒಟ್ಟು 2,23,592 ಮತದಾರರು ಇದ್ದಾರೆ.

ಚುನಾವಣಾ ಅಕ್ರಮ ತಡೆಗೆ ಬಿಗಿ ಭದ್ರತೆ: ಚೆಕ್ ಪೋಸ್ಟ್ ಗಳ ವಿವರ ಚುನಾವಣಾ ಆಯೋಗ ಚುನಾವಣೆಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿರುವುದರಿಂದ ತಾಲೂಕಿನಲ್ಲಿ ಅಂತರ ಜಿಲ್ಲಾ ಚೆಕ್ ಪೋಸ್ಟ್‌ಗಳನ್ನು ತೆರೆಯುವ ಮೂಲಕ ಸತ್ಯಗಾಲ ಹ್ಯಾಂಡ್ ಪೋಸ್ಟ್ ಹಾಗು ಅಂತರ ರಾಜ್ಯ ಚೆಕ್‌ಪೋಸ್ಟ್‌, ಪಾಲಾರ್, ನಾಲ ರೋಡ್ , ಅರ್ಧನಾರೀಪುರ ಈ ಚೆಕ್‌ಪೋಸ್ಟ್‌ನಲ್ಲಿ 3 ಪಾಳ್ಯದಲ್ಲಿ ಕೆಲಸ ನಿರ್ವಹಿಸಲು ಅಧಿಕಾರಿ ಸಿಬ್ಬಂದಿಯನ್ನು ಈಗಾಗಲೇ ನೇಮಕ ಮಾಡಲಾಗಿದೆ.

ಮಾದರಿ ನೀತಿ ಸಂಹಿತೆ ಅನುಷ್ಠಾನ ತಂಡಗಳ ವಿವರ:

ಸ್ಪೆಕ್ಟರ್ ಅಧಿಕಾರಿಗಳು 28, ಮಾಸ್ಟರ್ ಟ್ರೈನರ್‌ಗಳು 28, ವಿವಿಟಿ ತಂಡ 1, ಎಫ್ಎಸ್‌ಟಿ ಮೂರು ತಂಡದ ಒಂಬತ್ತು ಅಧಿಕಾರಿಗಳು 3 ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಎಂಸಿಸಿ ನೂಡಲ್ ಅಧಿಕಾರಿಯಾಗಿ ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಮತ್ತು ಪಪಂ ವ್ಯಾಪ್ತಿಯಲ್ಲಿ ಮುಖ್ಯ ಅಧಿಕಾರಿ ಪಟ್ಟಣ ಪಂಚಾಯತಿಯವರನ್ನು ನೇಮಕ ಮಾಡಲಾಗಿರುತ್ತದೆ ಎಂದರು.

ಕಂಟ್ರೋಲ್ ರೂಂ:

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಂಟ್ರೋಲ್ ರೂಂ ತೆರೆದಿದ್ದು 3 ಪಾಳ್ಯ ದಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿರುತ್ತದೆ ಕಂಟ್ರೋಲ್ ರೂಂ ಸಂಖ್ಯೆ 08224- 268032 ಸಾರ್ವಜನಿಕರ ಅನುಕೂಲಕ್ಕಾಗಿ ತೆರೆಯಲಾಗಿದೆ ಮತದಾರರ ಪರಿಷ್ಕರಣೆಯ ನಿರಂತರವಾಗಿದ್ದು ನಾಮಪತ್ರಗಳನ್ನು ಸಲ್ಲಿಸುವ ಅಂತಿಮ ದಿನಕ್ಕೆ ಏಳು ದಿನ ಮುಂಚಿತವಾದ ಅವಧಿಯವರೆಗೆ ನಮೂನೆ 6ರಲ್ಲಿ ಸೇರ್ಪಡೆಗೆ ಅವಕಾಶವಿರುತ್ತದೆ ಸದ್ಬಳಕೆ ಮಾಡಿಕೊಳ್ಳುವಂತೆ ಚುನಾವಣಾಧಿಕಾರಿ ತಿಳಿಸಿದರು. ತಹಸೀಲ್ದಾರ್‌ ಗುರುಪ್ರಸಾದ್, ಗ್ರಾಮಲೆಕ್ಕಿಗ ಶೇಷಣ್ಣ, ಮುಖಂಡರಾದ ಚಂಗವಾಡಿ ರಾಜು ಮತ್ತು ರಾಜುಗೌಡ ಇನ್ನಿತರ ಮುಖಂಡರಿದ್ದರು.

ರಾಜಕೀಯ ಪಕ್ಷಗಳ ಪೋಸ್ಟರ್, ಗೋಡೆ ಬರಹ, ಬ್ಯಾನರ್ ತೆರವು

ಚಾಮರಾಜನಗರ: ಲೋಕಸಭಾ ಚುನಾವಣೆ ಜಾರಿಯಾದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ನಗರದ ಪ್ರಮುಖ ವೃತ್ತಗಳು, ವಾರ್ಡ್‌ನ ಪ್ರಮುಖ ಬೀದಿಗಳ ರಸ್ತೆಯ ಅಕ್ಕ ಪಕ್ಕ ಹಾಕಿರುವ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸಂಬಂಧ ಪಟ್ಟಂತಹ ಪೋಸ್ಟರ್, ಗೋಡೆ ಬರಹ, ಬ್ಯಾನರ್‌ಗಳನ್ನ ತೆರವು ಗೊಳಿಸಲು ಚುನಾವಣಾ ಆಯೋಗವು ಸೂಚಿಸಿರುವುದರಿಂದ ಎಲ್ಲರೂ ಚುನಾವಣೆ ನೀತಿ ಸಂಹಿತೆ ಅದೇಶವನ್ನು ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಯುಕ್ತ ರಾಮದಾಸ್ ತಿಳಿಸಿದ್ದಾರೆ. ಪಟ್ಟಣ ಪ್ರದೇಶದಲ್ಲಿ ರಾಜಕಾರಿಣಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸಂಬಂದಿಸಿದ ಪ್ಲೆಕ್ಸ್ ಗಳು,ಗೋಡೆ ಬರಹ ಗಳು, ದೊಡ್ಡ ದೊಡ್ಡ ಹೊರ್ಡಿಂಗ್ಸ್ ಗಳು, ಪೋಸ್ಟರ್ ಬ್ಯಾನರ್ ಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು. ಈ ವೇಳೆ ಆರೋಗ್ಯಾಧಿಕಾರಿ ಮಂಜುನಾಥ್, ನಾರಾಯಣ್, ಹಾಗೂ ಆರೋಗ್ಯ ಸಿಬ್ಬಂದಿ ಮಣಿಕಂಠ, ಅರ್ಫಾಜ್ ಅಹ್ಮದ್,ತನ್ವಿರ್, ಮಂಜು, ರಂಗಸ್ವಾಮಿ, ಚೇತನ್, ಸಿ ಡಿ ವೆಂಕಟೇಶ್, ಮನೋಹರ ಹಾಜರಿದ್ದರು.