ಸದ್ಯ ತಾಲೂಕಿನ ೨೬ ಗ್ರಾಪಂಗಳಲ್ಲಿ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಕೆಲವೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಜಲಮೂಲಗಳಲ್ಲಿ ನೀರಿನ ಕೊರತೆ ಕಂಡು ಬಂದಿದೆ. ಇಂತಹ ಗ್ರಾಮಗಳಿಗೆ ಹೆಚ್ಚುವರಿಯಾಗಿ ಕೊಳವೆ ಬಾವಿ ಅಥವಾ ತೆರೆದ ಬಾವಿಯನ್ನು ತುರ್ತು ನಿರ್ವಹಣಾ ನಿಧಿಯಲ್ಲಿ ನಿರ್ಮಿಸಲಾಗುವುದು. ಸದ್ಯ ಜಲಜೀವನ್ ಮಿಷನ್ ಕಾಮಗಾರಿ ಕಳೆದ 3 ವರ್ಷಗಳಿಂದ ನಡೆಯುತ್ತಿದ್ದರೂ ತೃಪ್ತಿಕರವಾಗಿಲ್ಲ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಬೇಸಿಗೆಯಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ತಲೆದಂಡವಾಗುವುದು ಖಚಿತ ಎಂದು ಶಾಸಕ ಸಿಮೆಂಟ್ ಮಂಜು ಎಚ್ಚರಿಸಿದರು.ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ಸಂಬಂಧ ಕರೆಯಲಾಗಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸದ್ಯ ತಾಲೂಕಿನಲ್ಲಿ ಬೇಸಿಗೆ ಬೇಗೆ ಹೆಚ್ಚಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಖರ ಬಿಸಿಲಿನ ಝಳ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಮೇ ತಿಂಗಳು ಸಮೀಪಿಸಿದರೂ ಮುಂಗಾರು ಮಳೆಯ ಲಕ್ಷಣಗಳಿಲ್ಲದೆ ಇರುವುದರಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಜಲಮೂಲಗಳು ಬತ್ತುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.
ಸದ್ಯ ತಾಲೂಕಿನ ೨೬ ಗ್ರಾಪಂಗಳಲ್ಲಿ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಕೆಲವೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಜಲಮೂಲಗಳಲ್ಲಿ ನೀರಿನ ಕೊರತೆ ಕಂಡು ಬಂದಿದೆ. ಇಂತಹ ಗ್ರಾಮಗಳಿಗೆ ಹೆಚ್ಚುವರಿಯಾಗಿ ಕೊಳವೆ ಬಾವಿ ಅಥವಾ ತೆರೆದ ಬಾವಿಯನ್ನು ತುರ್ತು ನಿರ್ವಹಣಾ ನಿಧಿಯಲ್ಲಿ ನಿರ್ಮಿಸಲಾಗುವುದು. ಸದ್ಯ ಜಲಜೀವನ್ ಮಿಷನ್ ಕಾಮಗಾರಿ ಕಳೆದ 3 ವರ್ಷಗಳಿಂದ ನಡೆಯುತ್ತಿದ್ದರೂ ತೃಪ್ತಿಕರವಾಗಿಲ್ಲ. ಕೆಲವೊಂದು ಗ್ರಾಮಗಳಲ್ಲಿ ಗುತ್ತಿಗೆದಾರರಿಂದಾಗಿ ಕಾಮಗಾರಿ ವಿಳಂಭವಾಗಿದ್ದರೆ, ಮತ್ತೆ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ, ವಿದ್ಯುತ್ ಇಲಾಖೆಯ ನಡುವಿನ ಹೊಂದಾಣಿಕೆ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಶೇ ೮೦ ರಿಂದ ೯೦ ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಇನ್ನೊಂದು ತಿಂಗಳಿನಲ್ಲಿ ಸಂಪೂರ್ಣಗೊಳಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ. ಹೆಬ್ಬಸಾಲೆ ಗ್ರಾಪಂ ಹೆನ್ನಲಿ ಗ್ರಾಮ ಸೇರಿ ಐದು ಗ್ರಾಮಗಳಿಗೆ ಪುರಸಭೆ ನೀರಿನ ಘಟಕದಿಂದ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೆಬ್ಬಸಾಲೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.ಸಭೆಯಲ್ಲಿ ಇಒ ಗಂಗಾಧರ್, ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಎಡಿ ಆದಿತ್ಯಾ ಮುಂತಾದವರಿದ್ದರು.
-----