- ಹಿರಿಯರ ಬಗ್ಗೆ ಸ್ವಾಮೀಜಿ ಹಗುರ ಮಾತು, ಪಂಚಮಸಾಲಿ ಪೀಠದ ಟ್ರಸ್ಟಿಗಳ ಎಚ್ಚರಿಕೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಉಚ್ಛಾಟನೆ ಟ್ರಸ್ಟ್‌ನ ಅಧಿಕೃತ ತೀರ್ಮಾನವಾಗಿದ್ದು, ಗೌರವಯುತವಾಗಿ ಶ್ರೀಗಳು ಪೀಠ ತ್ಯಾಗ ಮಾಡದಿದ್ದರೆ ಕಾನೂನು ಕ್ರಮದ ಮೂಲಕ ಹೊರ ಹಾಕುವುದಾಗಿ ಪೀಠದ ಟ್ರಸ್ಟಿಗಳಾದ ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು ಎಚ್ಚರಿಸಿದ್ದಾರೆ.ನಗರದ ಚೇತನ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳ ಉಚ್ಛಾಟನೆ ನಿರ್ಧಾರ ಇಂದು ಅಧಿಕೃತವಾಗಿದ್ದು, ಈ ಬಗ್ಗೆ ಈಗಾಗಲೇ ಸ್ವಾಮೀಜಿಗೆ ನೋಟಿಸ್ ಸಹ ನೀಡಿದ್ದು, ಶೀಘ್ರವೇ ಕಾನೂನುಬದ್ಧ ಆದೇಶ ಹೊರಡಿಸಲಾಗುವುದು ಎಂದರು.
ಶ್ರೀಮಠದ ಬಳಿ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಹರಿಹರ ತಹಸೀಲ್ದಾರ್, ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಮಠದೊಳಗೆ ಟ್ರಸ್ಟಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಪ್ರವೇಶ ನೀಡದಂತೆ ಕೋರಲಾಗಿದೆ ಎಂದು ಅವರು ತಿಳಿಸಿದರು.ಪಂಚಮಸಾಲಿ ಪೀಠ, ಬೆಂಗಳೂರಿನ ಶ್ವಾಸ ಕೇಂದ್ರದಲ್ಲಿ ಒಂದರ ಆಯ್ಕೆಗೆ ನೀಡಿದ್ದ ಗಡುವಿಗೆ ಸ್ವಾಮೀಜಿ ನಿರ್ಲಕ್ಷ್ಯ ತೋರಿದರು. ಪೀಠಕ್ಕೆ ಬರುವ ಮುನ್ನವೇ ಈ ಷರತ್ತನ್ನು ಹಾಕಿದ್ದೆವು. ಆಗ ಸ್ವಾಮೀಜಿ ಒಪ್ಪಿದ್ದರು. ಸಮಾಜವನ್ನು ಒಗ್ಗೂಡಿಸುವ ಬದಲು, ಗುಂಪುಗಾರಿಕೆ ಮಾಡುತ್ತಿದ್ದಾರೆ. ಬೆಳಗಾವಿ ನಿಡಸೋಸಿ ಮಠದ ಜಗದ್ಗುರು ಸ್ಥಾನಕ್ಕೂ ಅರ್ಜಿ ಸಲ್ಲಿಸಿ, ಪಂಚಮಸಾಲಿ ಪೀಠಕ್ಕೆ ದ್ರೋಹ ಬಗೆದಿದ್ದಾರೆ ಎಂದು ಅವರು ದೂರಿದರು.
ಪೀಠ ತ್ಯಜಿಸಿ ಬೀದಿಗೆ ಬೀಳುವ ಆತಂಕದಲ್ಲಿ ಟ್ರಸ್ಟ್ ಮುಖಂಡರ ವಿರುದ್ಧವೇ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಸ್ವಾಮೀಜಿ ನಡೆ, ನುಡಿ ಸರಿ ಇಲ್ಲ. ಮಠ ಸ್ಥಾಪನೆಗೆ ಕಾರಣರಾದ ಹಿರಿಯರನ್ನೇ ಸಾರ್ವಜನಿಕ ವೇದಿಕೆಗಳಲ್ಲಿ ಸ್ವಾಮೀಜಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಟ್ರಸ್ಟಿಗಳನ್ನು ಕೆಟ್ಟ ಪದಗಳಲ್ಲಿ ನಿಂದಿಸುತ್ತಿದ್ದಾರೆ. ಚಪ್ಪಲಿ ಬಿಡುವ ಜಾಗದಲ್ಲಿ ಟ್ರಸ್ಟಿಗಳನ್ನು ನಿಲ್ಲಿಸುವುದಾಗಿ ಇದೇ ಸ್ವಾಮೀಜಿ ಹೇಳಿದ್ದರು ಎಂದು ಅವರು ಕಿಡಿಕಾರಿದರು.
ಏಕ ವ್ಯಕ್ತಿ ಟ್ರಸ್ಟ್ (ಸೊಲೋ ಟ್ರಸ್ಟ್) ಮಾಡುವಂತೆ ಒತ್ತಡ ಹೇರಿದ್ದರು. ಅದಕ್ಕೆ ಟ್ರಸ್ಟಿಗಳು ಒಪ್ಪದಿದ್ದಾಗ ಬೆಂಬಲಿಗರ ಮೂಲಕ ಲೆಕ್ಕ ಕೊಡಿ ನಾಟಕ ನಡೆಸಿದ್ದಾರೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಲೆಕ್ಕ ಕೇಳುವುದಕ್ಕೆ ಯಾವುದೇ ಅಭ್ಯಂತರವೂ ಇಲ್ಲ. ಪ್ರತಿಯೊಂದರ ಲೆಕ್ಕವನ್ನೂ ಪೀಠದ ನೋಟಿಸ್ ಬೋರ್ಡ್‌ನಲ್ಲಿ ಟ್ರಸ್ಟ್‌ನಿಂದ ಹಾಕಿದ್ದೇವೆ. ಯಾರು ಬೇಕಾದರೂ ಬಂದು ಲೆಕ್ಕವನ್ನು ಪರಿಶೀಲಿಸಬಹುದು ಎಂದು ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು ಸ್ಪಷ್ಟಪಡಿಸಿದರು.
ಸಮಾಜದ ಯುವ ಮುಖಂಡ ಎಚ್.ಎಸ್. ನಾಗರಾಜ ಮಾತನಾಡಿ, ಸ್ವಾಮೀಜಿಯವರ ವೈಯಕ್ತಿಕ ಪ್ರತಿಷ್ಟೆಗೆ ಪಂಚಮಸಾಲಿ ಸಮಾಜ ಹೋಳಾಗುತ್ತಿದೆ. ಮೀಸಲಾತಿಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾದ ಇಂತಹ ನಿರ್ಣಾಯಕ ಸಮಯದಲ್ಲಿ ಪೀಠಗಳ ನಡುವಿನ ಕಿತ್ತಾಟದಿಂದಾಗಿ ಸಮುದಾಯಕ್ಕೆ ಸಾಮಾಜಿಕ, ರಾಜಕೀಯವಾಗಿ ಹಿನ್ನಡೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಮಾಜದ ಮುಖಂಡರಾದ ಚಂದ್ರಶೇಖರ ಪೂಜಾರ, ನಾಗನಗೌಡ, ಪುಂಡಲೀಕಪ್ಪ ಇತರರು ಇದ್ದರು.
- - -(ಕೋಟ್) ಹರಿಹರ ಪಂಚಮಸಾಲಿ ಟ್ರಸ್ಟ್‌ನ ನಿರ್ಣಯವನ್ನು ಈಗಾಗಲೇ ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಶ್ರೀಗಳೇ ಸ್ವಯಂ ಪ್ರೇರಣೆಯಿಂದ ಮಠದಿಂದ ಹೊರ ನಡೆದರೆ ಉತ್ತಮ. ಇಲ್ಲವಾದರೆ ಕಾನೂನು ಅದರ ಕೆಲಸ ಮಾಡುತ್ತದೆ.
- ಜೆ.ಪಿ.ಪಾಟೀಲ್, ಶ್ರೀಮಠದ ಟ್ರಸ್ಟಿ.- - -
-13ಕೆಡಿವಿಜಿ1: ದಾವಣಗೆರೆ ಚೇತನಾ ಹೋಟೆಲ್‌ನಲ್ಲಿ ಪಂಚಮಸಾಲಿ ಪೀಠದ ಟ್ರಸ್ಟಿಗಳಾದ ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.