ಸಾರಾಂಶ
ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೇಸಿಗೆಯಲ್ಲಿ ಯಾವುದೇ ಗ್ರಾಮ, ನಗರ ಮತ್ತು ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆ ಆದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಿನಿಂದಲೇ ಅಧಿಕಾರಿಗಳು ಕುಡಿಯುವ ನೀರಿಗೆ ಪರಿಹಾರ ಕಾರ್ಯಗಳನ್ನು ಯೋಜಿಸಿ, ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕು, ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ 83 ಗ್ರಾಪಂ ವ್ಯಾಪ್ತಿಯ ಸುಮಾರು 236 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದ್ದು, ಈ ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರದ ನಿರ್ದೇಶನದಂತೆ ಖಾಸಗಿ ಬೋರ್‌ವೆಲ್ ಹಾಗೂ ಪರ್ಯಾಯ ನೀರಿನ ಮೂಲಗಳ ಬಗ್ಗೆ ಗುರುತಿಸಿ, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1,056 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ 165 ಘಟಕಗಳು ಕೆಟ್ಟಿದ್ದು, ಇವುಗಳನ್ನು ದುರಸ್ತಿಗೊಳಿಸಬೇಕಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವೀರೇಂದ್ರ ಪಪ್ಪಿ ಅವರು ವಾಸ್ತವವಾಗಿ ದುರಸ್ತಿಯಾಗಬೇಕಾದ ಶುದ್ಧ ನೀರಿನ ಘಟಕಗಳ ತುಂಬಾ ಜಾಸ್ತಿ ಇದೆ ಎಂದರು.ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಗ್ರಾಮೀಣ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡುತ್ತಿಲ್ಲ, ಶಾಸಕರಿಗೆ ಯಾವುದೇ ಮಾಹಿತಿ ಕೊಡುತ್ತಿಲ್ಲ, ಹೀಗಾದರೆ ಮುಂಬರುವ ಸಮಸ್ಯೆಗಳನ್ನು ನಾವು ಯಾವ ರೀತಿ ಎದುರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಹಳ್ಳಿಗಳಿಗೆ ಖುದ್ದು ತೆರಳಿ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಅರಿಯುವ ಹಾಗೂ ಆಯಾ ಕ್ಷೇತ್ರ ಶಾಸಕರೊಂದಿಗೆ ಚರ್ಚಿಸಿ ವಾಸ್ತವತೆ ತಿಳಿದುಕೊಳ್ಳುವ ಕಾರ್ಯ ಮಾಡಬೇಕು ಎಂದು ಹೇಳಿದರು.ಶಾಸಕ ರಘುಮೂರ್ತಿ ಅವರು ಆರ್‌ಒ ಘಟಕಗಳನ್ನು ಅನುಷ್ಠಾನಗೊಳಿಸಿದ ಬಳಿಕ, ಅವುಗಳನ್ನು ಸಂಬಂಧಿಸಿದ ಗ್ರಾಪಂ ಗಳಿಗೆ ಹಸ್ತಾಂತರ ಮಾಡಬೇಕು, ಆದರೆ ಅಧಿಕಾರಿಗಳು ಈ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಅನ್ನಭಾಗ್ಯ ಯೋಜನೆಯಡಿ ಇನ್ನು ಮುಂದೆ 10 ಕೆಜಿ ಅಕ್ಕಿ ಕೊಡಲು ನಿರ್ಧರಿಸಿದ್ದು, ಅದಕ್ಕೆ ಸಂಬಂಧಿಸಿದ ಸಿದ್ಧತೆ ಮಾಡಿಕೊಳ್ಳಬೇಕು. ವಯೋವೃದ್ಧರಿಗೆ ಬಯೋಮೆಟ್ರಿಕ್ ಕಾರಣಕ್ಕೆ ಪಡಿತರ ನೀಡುವುದನ್ನು ನಿಲ್ಲಿಸಬಾರದು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಸೂರಜ್ ಹೆಗಡೆ ಹೇಳಿದರು.ಕೋವಿಡ್ ಸಂದರ್ಭದಲ್ಲಿ ಸಿಎಸ್‌ಆರ್ ನಿಧಿಯಲ್ಲಿ 47 ಕೋಟಿ, ಡಿಎಂಎಫ್ ನಿಧಿಯಲ್ಲಿ 14.85 ಕೋಟಿ ಹಾಗೂ ಸರ್ಕಾರದ ಅನುದಾನದಲ್ಲಿ ಖರೀದಿಸಲಾದ ವೈದ್ಯಕೀಯ ಉಪಕರಣ ಹಾಗೂ ಔಷಧಿಗಳ ಖರೀದಿ ಮತ್ತು ಬಳಕೆಯ ಲೆಕ್ಕಪತ್ರಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರು, ವೈದ್ಯಕೀಯ ಕಾಲೇಜಿಗೆ ವೈದ್ಯರ ನೇಮಕಾತಿಯಲ್ಲಿ ಬಹಳಷ್ಟು ದೂರುಗಳು ಕೇಳಿಬರುತ್ತಿವೆ ಎಂದರು.