ತೈಲ ಬೆಲೆ ಏರಿಕೆ: ಜಿಲ್ಲೆಯ ಹಲವೆಡೆ ಬಿಜೆಪಿ ರಸ್ತೆ ತಡೆ

| Published : Jun 21 2024, 01:03 AM IST

ತೈಲ ಬೆಲೆ ಏರಿಕೆ: ಜಿಲ್ಲೆಯ ಹಲವೆಡೆ ಬಿಜೆಪಿ ರಸ್ತೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ತೈಲ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಬಿಜೆಪಿ ಗುರುವಾರ ರಸ್ತೆ ತಡೆ ಚಳುವಳಿಗೆ ಕರೆ ಕೊಟ್ಟ ಮೇರೆಗೆ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕೊಪ್ಪ ತಾಲೂಕುಗಳಲ್ಲಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

- ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ ತಾಲೂಕುಗಳಲ್ಲಿ ರಸ್ತೆ ತಡೆ, ಪ್ರತಿಭಟನಾಕಾರರ ಬಂಧನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತೈಲ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಬಿಜೆಪಿ ಗುರುವಾರ ರಸ್ತೆ ತಡೆ ಚಳುವಳಿಗೆ ಕರೆ ಕೊಟ್ಟ ಮೇರೆಗೆ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕೊಪ್ಪ ತಾಲೂಕುಗಳಲ್ಲಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ ಕಾರಣಕ್ಕಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ತಾಲೂಕು ಕಚೇರಿಯಿಂದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ನೇತೃತ್ವದಲ್ಲಿ ಮೆರವಣಿಗೆ ಹೊರಟ ಕಾರ್ಯ ಕರ್ತರು ಹನುಮಂತಪ್ಪ ವೃತ್ತದಲ್ಲಿ ಕಡೂರು ಮಾರ್ಗವಾಗಿ ಬರುವ ವಾಹನಗಳು ಮುಂದೆ ಹೋಗದಂತೆ ರಸ್ತೆಯಲ್ಲಿಯೇ ಕುಳಿತರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಪೊಲೀಸರು ಮನ ವೊಲಿಸಿದರೂ ಕೂಡ ಪ್ರತಿಭಟನೆ ಮುಂದುವರಿಸಿದರು.

ಆಗ ಪೊಲೀಸರು ಬಿಜೆಪಿ ಮುಖಂಡರಾದ ಪ್ರೇಮ್‌ಕುಮಾರ್, ರಾಜು ರವೀಂದ್ರ ಬೆಳವಾಡಿ, ಅನಿಲ್‌ ಕುಮಾರ್‌, ಬಿ. ರಾಜಪ್ಪ, ಕೌಶಿಕ್‌, ಎಸ್‌. ರವಿಕುಮಾರ್‌, ಹಿರೇಮಗಳೂರು ಪುಟ್ಟಸ್ವಾಮಿ, ಜಿ. ಶಂಕರ್‌, ವೆಂಕಟೇಶ್‌ ರಾಜ್‌, ರೇವನಾಥ್‌, ಕಬೀರ್‌, ಅನ್ವರ್‌ ಹಾಗೂ ಕಾರ್ಯಕರ್ತರನ್ನು ಬಂಧಿಸಿ ನಂತರದಲ್ಲಿ ಬಿಡುಗಡೆ ಮಾಡಿದರು.

ಮೂಡಿಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರು ತೈಲ ಬೆಲೆ ಏರಿಕೆ ವಿರುದ್ಧ ರಸ್ತೆ ತಡೆ ನಡೆಸಿದರು. ಮೂಡಿಗೆರೆ ತಾಲೂಕು ಅಧ್ಯಕ್ಷ ಗಜೇಂದ್ರ ಅವರ ನೇತೃತ್ವದಲ್ಲಿ ಲಯನ್ಸ್‌ ವೃತ್ತದಲ್ಲಿ ರಸ್ತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದೀಪಕ್‌ ದೊಡ್ಡಯ್ಯ, ರತನ್‌ ಹಾಗೂ ಕಾರ್ಯಕರ್ತರು ಇದ್ದರು.

ಕೊಪ್ಪ ಬಿಜೆಪಿ ಮಂಡಲದಿಂದ ಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಲಾಯಿತು. ರಾಜ್ಯ ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಪುಣ್ಯಪಾಲ್‌, ಕಾಂಗ್ರೆಸ್ ಸರ್ಕಾರ ಜನರ ಮೇಲೆ ತೆರಿಗೆ ಭಾರ ಹಾಕಿ ಲೂಟಿಯಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕೊಪ್ಪ ಬಿಜೆಪಿ ಮಂಡಲದ ಕಾರ್ಯದರ್ಶಿಗಳಾದ ಬಿಷೇಜ್ ಭಟ್ ಮತ್ತು ಅರುಣ್ ಶಿವಪುರ , ನಗರ ಘಟಕದ ಅಧ್ಯಕ್ಷ ದಿವಾಕರ್, ಸಿ.ಎಚ್.ಪ್ರಕಾಶ್, ಉದಯಕುಮಾರ್ ಜೈನ್, ಅರುಣ್ ಶೆಣೈ, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ಪೋಟೋ ಫೈಲ್‌ ನೇಮ್‌ 20 ಕೆಸಿಕೆಎಂ 3ತೈಲ ಬೆಲೆ ಏರಿಕೆ ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಗುರುವಾರ ರಸ್ತೆ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.