ಸಾರಾಂಶ
ಉಡುಪಿ/ಕಾರ್ಕಳ : ಲೋಕಸಭಾ ಚುನಾವಣೆಯ ಸೋಲಿನ ಹತಾಶೆಗೂಂಡ ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ರಾಜ್ಯದ ಜನತೆಗೆ ಬರೆ ಎಳೆದಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಚಿತ ಗ್ಯಾರಂಟಿ ಭಾಗ್ಯಗಳ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಖಜಾನೆ ಖಾಲಿ ಮಾಡಿದೆ. ಅದನ್ನು ತುಂಬಿಸಲು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರು. ಮತ್ತು ಡೀಸೆಲ್ ಬೆಲೆ 3.50 ರು. ಹೆಚ್ಚಳ ಮಾಡಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ ಎಂದವರು ಆರೋಪಿಸಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ಇಂಧನ ದರ ಇಳಿಕೆಗಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಆದರೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಸೆಸ್ ಇಳಿಕೆ ಮಾಡಿದರೂ ಕರ್ನಾಟಕ ಸರ್ಕಾರ ಮಾತ್ರ ತೆಪ್ಪಗಿತ್ತು. ಬಜೆಟ್ ಗೆ ಮುನ್ನವೇ ಪೆಟ್ರೋಲಿಯಂ ಉತ್ಪನಗಳ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಸಿರಾಡುವುದಕ್ಕೂ ತೆರಿಗೆ ಹಾಕುವುದು ಗ್ಯಾರಂಟಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಲೇವಾಡಿ ಮಾಡಿದ್ದಾರೆ.
ವೈದ್ಯ ಶಿಕ್ಷಣ ಸೇರಿದಂತೆ ವೃತ್ತಿ ಶಿಕ್ಷಣ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಿದ್ದ ಸರ್ಕಾರ ಪೆಟ್ರೋಲಿಗೆ ಬೆಂಕಿ ಹಚ್ಚಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದವರು ಎಚ್ಚರಿಸಿದ್ದಾರೆ.