ಹೊಳೆನರಸೀಪುರ: ಪಟ್ಟಣದ ಪೇಟೆ ಕುರುಹಿನಶೆಟ್ಟಿ ಬಡಾವಣೆಯ ಕುರುಹಿನಶೆಟ್ಟಿ ರಾಮಮಂದಿರದ ಶ್ರೀರಾಮನ ಭಕ್ತರು, ಯುವಕರು, ಯುವತಿಯರು, ಸುಮಂಗಲಿಯರು, ಚಿಣ್ಣರು ಶ್ರೀ ರಾಮನವಮಿಯ ಪ್ರಯುಕ್ತ ಸಂಪ್ರದಾಯದ ಆಚರಣೆಯಂತೆ ಓಕಳಿ ಹಬ್ಬ ಆಚರಿಸಿ, ಸಂಭ್ರಮಿಸಿದರು. ಪಟ್ಟಣದ ಕುರುಹಿನಶೆಟ್ಟಿ ಶ್ರೀ ರಾಮಮಂದಿರದಲ್ಲಿ ಪೂರ್ವಿಕರು ಧರ್ನುಮಾಸ ಭಜನಾ ಉತ್ಸವ ಮತ್ತು ಶ್ರೀ ರಾಮನವಮಿ ಪೂಜಾ ಮಹೋತ್ಸವ ಜತೆಗೆ ಓಕಳಿಯನ್ನು ೭೨ಕ್ಕೂ ಹೆಚ್ಚು ವರ್ಷಗಳ ಹಿಂದೆ ಪ್ರಾರಂಭಿಸಿದ್ದರು. ಹಿರಿಯರ ಮಾರ್ಗದರ್ಶನದಲ್ಲಿ ಪೂರ್ವಿಕರ ಸಂಪ್ರದಾಯದ ಆಚರಣೆಯಲ್ಲಿ ಕುರುಹಿನಶೆಟ್ಟಿ ಜನಾಂಗದವರು ತೊಡಗಿಸಿಕೊಂಡು ಸಂಸ್ಕೃತಿಯ ಪಾಲನೆ ಮಾಡುವ ಜತೆಗೆ ಓಕಳಿ ಮಹೋತ್ಸವಕ್ಕೆ ವಿಶೇಷ ಮೆರಗನ್ನು ನೀಡುತ್ತಿದ್ದಾರೆ. ಶ್ರೀ ರಾಮಮಂದಿರದಲ್ಲಿ ಶನಿವಾರ ದಿನದಂದು ಶ್ರೀ ಸೀತಾ, ರಾಮ, ಲಕ್ಷ್ಮಣ ಹಾಗೂ ಹನುಮಂತನ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಪೂಜಿಸಿದ ನಂತರ, ಅಡ್ಡೆ ಹೊತ್ತು ಯುವಕರು ೩೩ ಡಿಗ್ರಿ ತಾಪಮಾನದಲ್ಲೂ ಬಡಾವಣೆಯಲ್ಲಿ ಸಾಗಿ, ಭಕ್ತಿ ಸಮರ್ಪಿಸಿದರು. ಸುಮಂಗಲಿಯರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಶ್ರೀರಾಮನ ಭಕ್ತರಿಗೆ ನೈವೇದ್ಯದ ಕೊಸಂಬರಿ, ಮಜ್ಜಿಗೆ ವಿತರಿಸಿ, ಶ್ರೀರಾಮೋತ್ಸವದಲ್ಲಿ ಸಂಭ್ರಮಿಸಿದರು.