ಮಕ್ಕಳಿಗೆ ಸಂಸ್ಕಾರ ನೀಡಿದರೆ ವೃದ್ಧಾಪ್ಯ ಉತ್ತಮ: ಸಿವಿಲ್ ನ್ಯಾಯಾಧೀಶ ನೂರುನ್ನೀಸ

| Published : Nov 20 2024, 12:34 AM IST

ಮಕ್ಕಳಿಗೆ ಸಂಸ್ಕಾರ ನೀಡಿದರೆ ವೃದ್ಧಾಪ್ಯ ಉತ್ತಮ: ಸಿವಿಲ್ ನ್ಯಾಯಾಧೀಶ ನೂರುನ್ನೀಸ
Share this Article
  • FB
  • TW
  • Linkdin
  • Email

ಸಾರಾಂಶ

ತಂದೆ, ತಾಯಿ ವಯಸ್ಸಾದಾಗ, ತುಂಬಾ ಅಶಕ್ತರಾದ ಮೇಲೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ನಕಾರಾತ್ಮಕ ಚಿಂತನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನೂರುನ್ನೀಸರವರು ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು. ತುಮಕೂರಿನಲ್ಲಿ ಮಕ್ಕಳ ದಿನಾಚರಣೆ, ಅಂತಾರಾಷ್ಟ್ರೀಯ ಮಧುಮೇಹ ದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುತಂದೆ, ತಾಯಿ ವಯಸ್ಸಾದಾಗ, ತುಂಬಾ ಅಶಕ್ತರಾದ ಮೇಲೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ನಕಾರಾತ್ಮಕ ಚಿಂತನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತುಮಕೂರಿನ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸರವರು ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು. ಅವರು ರೋಟರಿ ತುಮಕೂರು, ಕಲಾ ಬೆಂಗಳೂರು ಹಾಗೂ ತುಮಕೂರಿನ ರೀಡ್ ಬುಕ್ ಫೌಂಡೇಷನ್ ಸಂಸ್ಥೆ ಸಹಯೋಗದಲ್ಲಿ ಎಂಪ್ರೆಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ, ಅಂತಾರಾಷ್ಟ್ರೀಯ ಮಧುಮೇಹ ದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೃದ್ಧಾಶ್ರಮಗಳು ಹೆಚ್ಚಾಗುವುದು ಸಂತೋಷ ಪಡುವ ವಿಚಾರವಲ್ಲ. ಬದಲಿಗೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ. ಮಕ್ಕಳೇ ವೃದ್ಧಾಶ್ರಮಗಳಿಗೆ, ಅನಾಥಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿರುವವರ ಜೀವನದ ನೋವು ಸಂಕಟಗಳನ್ನು ತಿಳಿದುಕೊಳ್ಳಿ. ಜೀವನದ ವಾಸ್ತವ ವಿಚಾರಗಳು ನಿಮಗೆ ಗೊತ್ತಾಗುತ್ತೆ ಎಂದರು.ಇತ್ತೀಚೆಗೆ ಹದಿಹರೆಯದ ಹೆಣ್ಣುಮಕ್ಕಳು ಮೊಬೈಲ್‌ನಲ್ಲಿ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಅಕೌಂಟ್ ತೆರೆದು ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿರುತ್ತಾರೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದವರಲ್ಲಿ ಒಬ್ಬರಾದರೂ ಸೈಬರ್ ಕ್ರಿಮಿನಲ್ ಇದ್ದೇ ಇರುತ್ತಾರೆ. ಕೊನೆಯ ಪಕ್ಷ ನಿಮಗೆ ಹದಿನೆಂಟು ವರ್ಷ ತುಂಬುವವರೆಗೂ ಸಾಮಾಜಿಕ ಜಾಲತಾಣಗಳಿಂದ ದೂರವಿರಿ ಎಂದರು.ಸಾನಿಧ್ಯ ವಹಿಸಿದ್ದ ಬೆಳ್ಳಾವಿಯ ಕಾರದ ಮಠದ ಪೀಠಾಧ್ಯಕ್ಷ ಕಾರದ ವೀರಬಸವ ಸ್ವಾಮಿಗಳು ಮಾತನಾಡಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದರೆ ಯಾರೂ ವೃದ್ಧಾಶ್ರಮಕ್ಕೆ ಹೋಗುವ ಸಂದರ್ಭ ಬರುವುದಿಲ್ಲ. ಜಗತ್ತಿಗೆ ಕೊಡುಗೆ ಕೊಟ್ಟು ಹೋದ ಅಕ್ಕಮಹಾದೇವಿ, ಬಸವಣ್ಣ, ಸ್ವಾಮಿ ವಿವೇಕಾನಂದ, ಎಪಿಜೆ ಅಬ್ದುಲ್ ಕಲಾಂ ತರಹ ನೀವು ಆಗಿ, ನಮ್ಮ ರಾಜ್ಯವನ್ನು ಕಟ್ಟುವ ಹೆಣ್ಣುಮಕ್ಕಳಾಗಿ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ತುಮಕೂರಿನ ರೀಡ್‌ಬುಕ್ ಫೌಂಡೇಷನ್ನಿನ ಅಧ್ಯಕ್ಷ ಡಾ. ಶಿವಶಂಕರ್ ಕಾಡದೇವರ ಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ. ಎಂ. ಕೃಷ್ಣಮೂರ್ತಿ, ಪಾಲಿಕೆಯ ಆರೋಗ್ಯಾಧಿಕಾರಿ ಡಾ. ವೀರೇಶ್ ಕಲ್ಮಠ್‌ ಮಾತನಾಡಿದರು. ರಾಜೇಶ್ವರಿ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ಎಂಪ್ರೆಸ್ ಬಾಲಕಿಯರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಸ್. ಪ್ರಕಾಶ್, ಉಪ ಪ್ರಾಂಶುಪಾಲರಾದ ಎಂ. ಮಂಜುಳ, ಎಂ.ಎಸ್. ಉಮೇಶ್, ಬಸವರಾಜ್ ಹಿರೇಮಠ್, ಅನಿತ, ವೀಣಾ, ಜಯಪ್ರಕಾಶ್, ಮಲ್ಲೇಶಯ್ಯ ಉಪಸ್ಥಿತರಿದ್ದರು. ಕಾವ್ಯ ಪ್ರಾರ್ಥಿಸಿದರು. ನಾಗಮಣಿ ಪ್ರಭಾಕರ್ ವಂದಿಸಿದರು.