ಆತ್ಯಾಚಾರ, ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಠಿಣ ಶಿಕ್ಷೆಗಾಗಿ ಆಗ್ರಹಿಸಿ ಎಸ್ಎಫ್ಐ ಪ್ರತಿಭಟನೆ

| Published : Aug 22 2024, 01:07 AM IST / Updated: Aug 22 2024, 05:45 AM IST

ಸಾರಾಂಶ

ಆತ್ಯಾಚಾರ, ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಸಿ ಗಲ್ಲು ಶಿಕ್ಷೆ ವಿಧಿಸಬೇಕು

 ಮೈಸೂರು :  ಮಕ್ಕಳು, ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಮಾಡುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸದಸ್ಯರು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಸಂಜೆ ಪ್ರತಿಭಟಿಸಿದರು.

ಕೊಲ್ಕತ್ತಾ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಆತ್ಯಾಚಾರ, ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಸಿ ಗಲ್ಲು ಶಿಕ್ಷೆ ವಿಧಿಸಬೇಕು. ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರನ್ನು ಕೆಲಸದಿಂದ ವಜಾ ಮಾಡಿ ವಿಚಾರಣೆಗೆ ಒಳಪಡಿಸಬೇಕು. ಪ್ರತಿಭಟನಾ ನಿರಂತರ ಸಂಘಟನೆ ಮುಖಂಡರು ಹಾಗೂ ವೈದ್ಯರು, ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಿಂಸಾತ್ಮಕ ಘಟನೆಗಳನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರದ ಆರೋಪಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಗರದ ಹೊರ ವಲಯದಲ್ಲಿರುವ ಶಾಲಾ ಕಾಲೇಜು ವಿವಿ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಿಗೆ ಪೋಲಿಸ್ ಗಸ್ತು ಹೆಚ್ಚಿಸಬೇಕು. ಕಾಲೇಜುಗಳು ಪ್ರಾರಂಭವಾಗುವ ಸಮಯ ಮತ್ತು ಕಾಲೇಜು ಬಿಡುವ ಸಮಯದಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದು ಅವರು ಆಗ್ರಹಿಸಿದರು.

ನಗರದ ಹೊರ ವಲಯ ಹಾಗೂ ನಗರದಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ದುರಸ್ತಿಯಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಬದಲಾಯಿಸಿ ಹೊಸ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಶಾಲಾ-ಕಾಲೇಜು ಹಾಗೂ ಮಹಿಳೆಯರು ಕೆಲಸ ಮಾಡುವಂತಹ ಪದೇಶಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚನೆ ಮಾಡಬೇಕು. ಪ್ರೊ. ವರ್ಮಾ ಸಮಿತಿಯ ಶಿಪಾರಸುಗಳನ್ನು ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಟಿ.ಎಸ್. ವಿಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಡಿ. ಅಭಿ, ಮುಖಂಡರಾದ ಎಸ್.ಕೆ. ಚಿರಾಗ್, ಶಿವು, ಮಂಜುನಾಥ್, ವಿಕಾಸ್, ಗಂಗಾಧರ್, ವಿನಾಯಕ್ ಮೊದಲಾದವರು ಇದ್ದರು.