ಸಾರಾಂಶ
ನಗರದ ಸಂಚಾರ ಪಶ್ಚಿಮ ವಿಭಾಗದ ಹಲಸೂರು ಗೇಟ್, ಚಿಕ್ಕಪೇಟೆ ಹಾಗೂ ಸಿ.ಟಿ.ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 30 ದಿನಗಳ ಕಾಲ ಕೆಲ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡುಗಳನ್ನು ಮಾಡಿದ್ದಾರೆ.
ಬೆಂಗಳೂರು : ನಗರದ ಸಂಚಾರ ಪಶ್ಚಿಮ ವಿಭಾಗದ ಹಲಸೂರು ಗೇಟ್, ಚಿಕ್ಕಪೇಟೆ ಹಾಗೂ ಸಿ.ಟಿ.ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಿಬಿಎಂಪಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು 30 ದಿನಗಳ ಕಾಲ ಕೆಲ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡುಗಳನ್ನು ಮಾಡಿದ್ದಾರೆ.
ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿ ಅವೆನ್ಯೂ ರಸ್ತೆಯಿಂದ ಸಿದ್ದಣ್ಣ ಗಲ್ಲಿ, ಬನ್ನಪ್ಪ ಪಾರ್ಕ್ ರಸ್ತೆಯಲ್ಲಿ ಅವೆನ್ಯೂ ರಸ್ತೆಯಿಂದ 15ನೇ ಕ್ರಾಸ್, ವಿಲ್ ರಸ್ತೆಯಲ್ಲಿ ಡಾ.ಟಿಸಿಎಂ ರಾಯನ್ ರಸ್ತೆ ಜಂಕ್ಷನ್‌ನಿಂದ ಅಕ್ಕಿಪೇಟೆ ಮುಖ್ಯರಸ್ತೆ, ಆರ್.ಟಿ.ಸ್ಟ್ರೀಟ್‌ನಲ್ಲಿ ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆ, ಆರ್.ಟಿ.ಸ್ಟ್ರೀಟ್‌ನಲ್ಲಿ ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಬಳೆಪೇಟೆ ಮುಖ್ಯರಸ್ತೆ, ಸಿಟಿ ಸ್ಟ್ರೀಟ್‌ನಲ್ಲಿ ದೇವರದಾಸಿಮಯ್ಯ ರಸ್ತೆಯಿಂದ ಓಟಿಸಿ ರಸ್ತೆವರೆಗೆ (ನಗರ್ತ ಪೇಟೆ ಮುಖ್ಯರಸ್ತೆ) ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು:
ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆ ಬನ್ನಪ್ಪ ರಸ್ತೆ ಮತ್ತು ಕೆ.ಜಿ. ರಸ್ತೆ ಬಳಸಬಹುದು. ಹಲಸೂರುಗೇಟ್ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಅವೆನ್ಯೂ ರಸ್ತೆ ಕಡೆ ಸಂಚರಿಸುವ ವಾಹನಗಳು ಕೆ.ಜಿ. ರಸ್ತೆ ಮುಖಾಂತರ ಸಂಚರಿಸಿ ಅವೆನ್ಯೂ ರಸ್ತೆ ತಲುಪಬಹುದು. ಬನ್ನಪ್ಪ ರಸ್ತೆ ಕಾಮಗಾರಿ ಹಿನ್ನೆಲೆ ಕಬ್ಬನ್‌ಪೇಟೆ ಮುಖ್ಯ ರಸ್ತೆ ಬಳಸಬಹುದು.
ಚಿಕ್ಕಪೇಟೆ ಸಂಚಾರ ಠಾಣೆ ವ್ಯಾಪ್ತಿ:
ರಾಯನ್ ರಸ್ತೆ, ಜಂಕ್ಷನ್‌ನಿಂದ ಬರುವ ವಾಹನಗಳು ಡಾ.ಟಿ.ಸಿ.ಎಂ. ರಾಯನ್ ರಸ್ತೆ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಗೂಡ್ಸ್ ಶೆಡ್ ರಸ್ತೆಯಲ್ಲಿ ಸಾಗಿ ಶಾಂತಲಾ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕಾಟನ್ ಪೇಟೆ ಮುಖ್ಯರಸ್ತೆ ಮೂಲಕ ಸಂಚರಿಸಬಹುದು. ಬಿನ್ನಿಮಿಲ್ ಜಂಕ್ಷನ್ ನಿಂದ ಬರುವ ವಾಹನಗಳು ಬನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸಾಗಿ ಶಿರಸಿ ವೃತ್ತದಲ್ಲಿ ಎಡ ತಿರುವು ಪಡೆದು ಮೈಸೂರು ರಸ್ತೆ ಮೂಲಕ ಸಂಚರಿಸಬಹುದು. ಮೈಸೂರು ರಸ್ತೆಯಿಂದ ಬರುವ ವಾಹನಗಳು ಗೂಡ್ಸ್ ಶೆಡ್ ರಸ್ತೆಯಲ್ಲಿ ಸಾಗಿ ಶಾಂತಲಾ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕಾಟನ್ ಪೇಟೆ ಮುಖ್ಯರಸ್ತೆ ಮುಖಾಂತರ ಸಂಚರಿಸಬಹುದು.
ಸಿ.ಟಿ.ಮಾರ್ಕೆಟ್ ಸಂಚಾರ ಠಾಣೆ ವ್ಯಾಪ್ತಿ:
*ಆರ್.ಟಿ ಸ್ಟ್ರೀಟ್ ರಸ್ತೆಯಲ್ಲಿ ಕಾಮಗಾರಿ ವೇಳೆ ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆಗೆ ಸಂಚರಿಸಬೇಕಾದ ವಾಹನಗಳು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಮುಂದುವರೆದು ಮಾಮೂಲ್ ಪೇಟೆಗೆ (ಬೆಳ್ಳಿ ಬಸವಣ್ಣ ದೇವಸ್ಥಾನ ರಸ್ತೆ) ಎಡ ತಿರುವು ಪಡೆದು ಅವೆನ್ಯೂ ರಸ್ತೆಯನ್ನು ಸಂಪರ್ಕಿಸಬಹುದು. ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಬಳಪೇಟೆ ಮುಖ್ಯರಸ್ತೆಗೆ ಸಂಚರಿಸಬೇಕಾದ ವಾಹನಗಳು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಮುಂದುವರೆದು ಚಿಕ್ಕಪೇಟೆ ವೃತ್ತದಲ್ಲಿ ಬಲ ತಿರುವು ಪಡೆದು ಓಟಿಸಿ ರಸ್ತೆ ಮುಖಾಂತರ ಬಳೆಪೇಟೆ ಮುಖ್ಯರಸ್ತೆ ತಲುಪಬಹುದು. ಸಿಟಿ ಸ್ಟ್ರೀಟ್ ರಸ್ತೆಯ (ದೇವರ ದಾಸಿಮಯ್ಯ ರಸ್ತೆ ಯಿಂದ ಓಟಿಸಿ ರಸ್ತೆವರೆಗೆ) ಕಾಮಗಾರಿ ವೇಳೆ ದೇವರ ದಾಸಿಮಯ್ಯ ರಸ್ತೆಯಿಂದ ನಗರ್ತ ಪೇಟೆಗೆ ಸಂಪರ್ಕಿಸಬೇಕಾದ ವಾಹನಗಳು ದೇವರ ದಾಸಿಮಯ್ಯ ರಸ್ತೆಯಲ್ಲಿ ಮುಂದುವರೆದು ಸಿದ್ದಣ್ಣ ಗಲ್ಲಿ ರಸ್ತೆಗೆ ಬಲ ತಿರುವು ಪಡೆದು ನಗರ್ತ ಪೇಟೆ ರಸ್ತೆ ಸಂಪರ್ಕಿಸಬಹುದು. ನಗರ್ತ ಪೇಟೆ ರಸ್ತೆಯಿಂದ ದೇವರ ದಾಸಿಮಯ್ಯ ರಸ್ತೆ ಕಡೆಗೆ ಸಿಟಿ ಸ್ಟ್ರೀಟ್ ಮುಖಾಂತರ ಸಂಚರಿಸುವ ವಾಹನಗಳು ನಗರ್ತ ಪೇಟೆ ರಸ್ತೆಯಲ್ಲಿ ಎಡತಿರುವು ಪಡೆದು ಅವೆನ್ಯೂ ರಸ್ತೆ, ಮುಖಾಂತರ ಸಾಗಿ ದೇವರ ದಾಸಿಮಯ್ಯ ರಸ್ತೆಯನ್ನು ಸಂಪರ್ಕಿಸಬಹುದು.