ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಳಗನ್ನಡ ಕಾವ್ಯಗಳು ಜಗತ್ತಿನ ಬೇರೆ ಭಾಷೆಗಳಿಗೆ ಅನುವಾದಗೊಂಡು ವ್ಯಾಪಕವಾಗಿ ಮುಟ್ಟುವಂತಾಗಬೇಕು. ಇದು ಕಷ್ಟ ಮತ್ತು ಸವಾಲಿನ ಕೆಲಸ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿದರು.

ಹಾವೇರಿ: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಳಗನ್ನಡ ಕಾವ್ಯಗಳು ಜಗತ್ತಿನ ಬೇರೆ ಭಾಷೆಗಳಿಗೆ ಅನುವಾದಗೊಂಡು ವ್ಯಾಪಕವಾಗಿ ಮುಟ್ಟುವಂತಾಗಬೇಕು. ಇದು ಕಷ್ಟ ಮತ್ತು ಸವಾಲಿನ ಕೆಲಸ. ಹಳಗನ್ನಡದ ಓದು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಹಿರಿಯ ವಿದ್ವಾಂಸರು ತಮ್ಮ ಜ್ಞಾನವನ್ನು ಹೊಸ ಪೀಳಿಗೆಯಲ್ಲಿ ಹಂಚಿಕೊಳ್ಳಬೇಕು. ಕನ್ನಡದ ನಿಜ ಸತ್ವ ಕುಂದಬಾರದು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿದರು. ಧಾರವಾಡ ವಿದ್ಯಾವರ್ಧಕ ಸಂಘದ ಸಾಹಿತ್ಯ ಮತ್ತು ಅನುಭಾವ ಮಂಟಪ, ಹಾವೇರಿ ವಿಶ್ವವಿದ್ಯಾಲಯ ಸಂಯುಕ್ತವಾಗಿ ಏರ್ಪಡಿಸಿದ್ದ ಹಳಗನ್ನಡ ಕಾವ್ಯಗಳ ಓದು ಮತ್ತು ವಿಶ್ಲೇಷಣೆ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಜ್ಞಾನ ವಿಕಾಸಕ್ಕೆ ಸಾಹಿತ್ಯವೇ ಮೂಲ. ಅದರ ಮೂಲಕವೇ ಇತಿಹಾಸ ಪುರಾಣ ಚರಿತ್ರೆಯನ್ನೂ ಓದಬಹುದು. ಕನ್ನಡ ಮಹಾಕಾವ್ಯಗಳು ನಮ್ಮ ಜೀವನ ವಿಧಾನ ಮತ್ತು ಸಂಸ್ಕೃತಿಯ ಪ್ರತಿಬಿಂಬಗಳು ಎಂದು ಅವರು ಹೇಳಿದರು.ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಲಗತ್ತಿ ಮಾತನಾಡಿ, ಕನ್ನಡ, ಕನ್ನಡಿಗ, ಕರ್ನಾಟಕ ಉಳಿಯುವಲ್ಲಿ ವಿದ್ಯಾವರ್ಧಕ ಸಂಘ ಒಂದು ಶತಮಾನದಿಂದ ಕೆಲಸ ನಿರ್ವಹಿಸುತ್ತಿದೆ. ಏಕೀಕರಣ ಮತ್ತು ಗೋಕಾಕ್ ಚಳವಳಿಗಳು ಆರಂಭವಾದದ್ದು ಸಂಘದಿಂದಲೇ ಎಂದ ಅವರು, ಹಾವೇರಿ ವಿಶ್ವವಿದ್ಯಾಲಯ ಕನ್ನಡದ ಅಮೂಲ್ಯ ಹಳಗನ್ನಡ ಕಾವ್ಯದ ಓದು ಏರ್ಪಡಿಸಿದ್ದು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯೋಗಿ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯಕ್ರಮದ ಸಂಯೋಜಕ ಎಸ್.ಆರ್. ಹಿರೇಮಠ, ಮರೆತು ಮರೆಯಾಗಿ ಹೋಗಬಹುದಾದ ಹಳಗನ್ನಡದ ಕಾವ್ಯ ಅಗತ್ಯತೆಯನ್ನು ಅರಿತು ಕಾರ್ಯಕ್ರಮವನ್ನು ರೂಪಿಸಲಾಗಿದೆ, ಇದೊಂದು ಸದಭಿರುಚಿಯ ಯೋಜನೆ ಎಂದರು. ವಿಚಾರ ಸಂಕಿರಣ: ನಂತರ ನಡೆದ ವಿಚಾರ ಸಂಕಿರಣದಲ್ಲಿ ಧಾರವಾಡದ ಹಿರಿಯ ಸಾಹಿತಿ ಡಾ.ವೈ.ಎಂ. ಭಜಂತ್ರಿ ಅವರು ರನ್ನ ಕವಿಯ ಕಾವ್ಯಗಳಲ್ಲಿ ಸಮಕಾಲೀನತೆ ವಿಷಯ ಕುರಿತು ವಿಚಾರ ಮಂಡನೆ ಮಾಡಿದರು. ರನ್ನ ಗದಾಯುದ್ಧ ಇಂದಿಗೂ ಯುದ್ಧ ವಿರೋಧಿ ನೀತಿಗೆ ಮಾದರಿಯಾಗಿದೆ. ಇಲ್ಲಿಯ ಶೌರ್ಯ ಮತ್ತು ಸಾಹಸಗಳು ಅತ್ಯಂತ ಪ್ರಭಾವೀ ಕಾವ್ಯ. ಇದೊಂದು ಕನ್ನಡದ ಮೇರು ಕೃತಿ ಎಂದು ಅಭಿಪ್ರಾಯಪಟ್ಟರು.

ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸವನ್ನು ನೀಡಿದ ಡಾ.ಪ್ರವೀಣ ಎಚ್. ಅವರು, ಪಂಪ ತನ್ನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಈ ಎರಡು ಪಠ್ಯಗಳಲ್ಲಿ ಛಲ, ಕುಲ, ವೀರ, ತ್ಯಾಗ, ಅಭಿಮಾನ, ಪ್ರೇಮದಂತಹ ಅನೇಕ ಸಾಮಾಜಿಕ ಮೌಲ್ಯಗಳಿಗೆ ಒತ್ತು ನೀಡುತ್ತ ಅಧಿಕಾರ ಕೇಂದ್ರಿತ ರಾಜಕಾರಣವನ್ನು ಪ್ರಶ್ನೆ ಮಾಡುತ್ತಾನೆ. ತನ್ನ ಎರಡೂ ಕಾವ್ಯಗಳಲ್ಲಿ ಯುದ್ಧ ನಿರಾಕರಣೆಯನ್ನು ಮಾಡಿ ಕಾವ್ಯ ಧರ್ಮವನ್ನು ಎತ್ತಿ ಹಿಡಿದ್ದಿದ್ದಾನೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಕಿಆಲೂರ ಸಿ.ಜೆ. ಬೆಲ್ಲದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಉಪನ್ಯಾಸಕ ಡಾ. ಕೃಷ್ಣಮೂರ್ತಿ ಆರ್., ಹಳಗನ್ನಡ ಕಾವ್ಯಗಳನ್ನು ಓದುವಾಗ ಭಾಷೆ ಹಿಂದೆ ಸರಿದು ಭಾವ ಹೊರಹೊಮ್ಮುತ್ತವೆ. ಅವುಗಳ ಅರ್ಥವಿನ್ಯಾಸಗಳು ಹೊಸ ವಿಸ್ತಾರ ಪಡೆಯುತ್ತವೆ. ಹಳಗನ್ನಡ ಕಾವ್ಯ ಓದುವಾಗ ಅದರ ಧ್ವನಿ, ನಿಲುಗಡೆ, ರಸ ಮತ್ತು ಛದಂಸ್ಸು ಅರ್ಥ ಮಾಡಿಕೊಂಡು ಓದಬೇಕು ಎಂದ ಅವರು, ಕೆಲವು ಮಹತ್ವದ ಕವಿಗಳ ಕಾವ್ಯವನ್ನು ಓದಿ ತೋರಿಸಿದರು. ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಸಾಹಿತ್ಯ ಮತ್ತು ಅನುಭಾವ ಮಂಟಪದ ಸಂಚಾಲಕ ಡಾ. ಜಿನದತ್ತ ಹಡಗಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ಸಲಹಾ ಸಮಿತಿ ಸದಸ್ಯ ಡಾ.ಪಿ.ಟಿ.ಲಕ್ಕಣ್ಣನವರ ಇದ್ದರು. ಸಮಾರಂಭದಲ್ಲಿ ಡಾ. ಸತೀಶ ಕುಲಕರ್ಣಿ, ಕಲಾವಿದ ಕರಿಯಪ್ಪ ಹಂಚಿನಮನಿ, ಚಂದ್ರಶೇಖರ ಮಾಳಗಿ, ಸಂಯೋಜಕ ಎಸ್. ಆರ್. ಹಿರೇಮಠ ಪಾಲ್ಗೊಂಡಿದ್ದರು. ದಿವ್ಯಾ ಕುಲಕರ್ಣಿ ಸ್ವಾಗತಿಸಿದರು. ಸೋಮಣ್ಣ ಡಂಬರಮತ್ತೂರ ಪರಿಚಯಿಸಿದರು. ವಾಣಿ ಅಗಡಿ ಮತ್ತು ಚೈತ್ರಾ ಹುಳಕೆಲ್ಲಪ್ಪನವರ ನಿರ್ವಹಿಸಿದರು. ಸುಮಾ ಜಿಗಳಿಕೊಪ್ಪ ವಂದಿಸಿದರು.