28 ರಂದು ಮುದುಕನ ಮದುವೆ ನಾಟಕ ಪ್ರದರ್ಶನ

| Published : Jul 26 2024, 01:31 AM IST

ಸಾರಾಂಶ

ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಹಾಸ್ಯನಟ ಮೂಗ್‌ ಸುರೇಶ್‌ ಅವರು ಸುದ್ದಿಗೋಷ್ಠಿ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೂಗ್‌ ಸುರೇಶ್‌ ಮತ್ತು ತಂಡ ಅಭಿನಯಿಸುವ ಹಾಸ್ಯ ನಾಟಕ ಮುದುಕನ ಮದುವೆ ನಾಟಕ ಪ್ರದರ್ಶನ ಜು.28 ರಂದು ನಗರದಲ್ಲಿ ನಡೆಯಲಿದೆ ಎಂದು ಹಾಸ್ಯ ನಟ ಮೂಗ್‌ ಸುರೇಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಡಾ. ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಜು.28ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಎರಡು ಪ್ರದರ್ಶನಗಳು ಜರುಗಲಿವೆ ಎಂದರು. ಮುದುಕನ ಮದುವೆ ನಾಟಕ 50 ವರ್ಷಗಳ ಹಳೆಯದಾದ ನಾಟಕವಾಗಿದ್ದು, ಹಲವಾರು ನಾಟಕ ತಂಡಗಳು ಈ ನಾಟಕ ಪ್ರದರ್ಶನವನ್ನು ನಡೆಸಿ ಯಶಸ್ಸು ಕಂಡಿದೆ. 8 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಈ ನಾಟಕ ಕಂಡಿದೆ ಎಂದರು. ಈ ನಾಟಕದಲ್ಲಿ ಪ್ರಮುಖ ಪಾತ್ರ ಅಭಿನಯಿಸುತ್ತಿದ್ದು, ನಾಟಕಗಳಲ್ಲಿ, ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅನುಭವವಿದೆ. ಜನಪ್ರಿಯ ನಟನಾಗಿರುವ ನನಗೆ ರಂಗಭೂಮಿ ಸೆಳೆತ ನನ್ನನ್ನು ಬಿಟ್ಟಿಲ್ಲ ಎಂದರು.

ರಂಗಭೂಮಿ ಜೀವಂತ ಕಲೆಯಾಗಿದ್ದು, ಈ ಜೀವಂತ ಕಲೆ ಉಳಿಯಬೇಕಿದೆ. ಇಂದು ನಾಟಕಗಳಲ್ಲಿ ಅಭಿನಯಿಸುವ ಕಲಾವಿದರ ಬದುಕು ಬಹಳ ಕಷ್ಟದಲ್ಲಿದೆ ಎಂದರು. ಇತ್ತೀಚೆಗೆ ಜನರು ಟಿವಿಗಳ ಕಾರ್ಯಕ್ರಮಗಳಿಗೆ ದಾಸರಾಗಿದ್ದಾರೆ. ಕುಳಿತು ನೋಡುತ್ತಿರುವುದರಿಂದ ಜನರು ಜಡವಾಗಿದ್ದಾರೆ. ಒಂದು ರೀತಿಯಲ್ಲಿ ರೋಗಗ್ರಸ್ತರಾಗುತ್ತಿದ್ದಾರೆ. ರಂಗಮಂದಿರಗಳಿಗೆ ಆಗಮಿಸಿ ಹಾಸ್ಯಭರಿತ ನಾಟಕಗಳನ್ನು ನೋಡುವುದನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಾಟಕ ಪ್ರದರ್ಶನಕ್ಕೆ ಒಬ್ಬರಿಗೆ 150 ರು. ಹಾಗೂ 200ರು. ಟಿಕೆಟ್‌ ದರ ನಿಗದಿ ಮಾಡಲಾಗಿದ್ದು, 200 ರಿಂದ 280 ಆಸನಗಳ ವ್ಯವಸ್ಥೆಯಿದೆ. ಟಿಕೆಟ್‌ಗಳನ್ನು ಖರೀದಿಸಿ ನಾಟಕ ಪ್ರದರ್ಶನವನ್ನು ಹೌಸ್‌ಪುಲ್‌ ಮಾಡಬೇಕು ಎಂದು ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ರಂಗಭೂಮಿ ಕಲಾವಿದರ ಜಿಲ್ಲಾಧ್ಯಕ್ಷ ಉಮ್ಮತ್ತೂರು ಬಸವರಾಜು, ಸಮಾಜ ಸೇವಕ ಸುರೇಶ್‌ಗೌಡ, ಡಾ. ಪರಮೇಶ್ವರಪ್ಪ ಇದ್ದರು.