ಹಳೆಯ ದರ - ಮಕ್ಕಳಿಗೆ ಹೊಸ ಶೂ ಕಷ್ಟ!

| N/A | Published : Jul 06 2025, 11:48 PM IST / Updated: Jul 07 2025, 07:14 AM IST

Government school

ಸಾರಾಂಶ

 ಎಂಟು ವರ್ಷಗಳ ಹಳೆಯ ದರದಲ್ಲೇ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ, ಸಾಕ್ಸ್‌ ಖರೀದಿ ಸಾಧ್ಯವಾಗದ ಕಾರಣ ಶಾಲಾ ಎಸ್‌ಡಿಎಂಸಿ ಪ್ರತಿನಿಧಿಗಳು ಹಾಗೂ ಮುಖ್ಯ ಶಿಕ್ಷಕರು ಹೆಚ್ಚುವರಿ ಅನುದಾನಕ್ಕಾಗಿ ದಾನಿಗಳ ಹುಡುಕಾಟಕ್ಕಿಳಿದಿದ್ದಾರೆ.  

ಲಿಂಗರಾಜು ಕೋರಾ

 ಬೆಂಗಳೂರು :  ರಾಜ್ಯ ಸರ್ಕಾರ ನೀಡುತ್ತಿರುವ ಎಂಟು ವರ್ಷಗಳ ಹಳೆಯ ದರದಲ್ಲೇ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ, ಸಾಕ್ಸ್‌ ಖರೀದಿ ಸಾಧ್ಯವಾಗದ ಕಾರಣ ಶಾಲಾ ಎಸ್‌ಡಿಎಂಸಿ ಪ್ರತಿನಿಧಿಗಳು ಹಾಗೂ ಮುಖ್ಯ ಶಿಕ್ಷಕರು ಹೆಚ್ಚುವರಿ ಅನುದಾನಕ್ಕಾಗಿ ದಾನಿಗಳ ಹುಡುಕಾಟಕ್ಕಿಳಿದಿದ್ದಾರೆ. ಇನ್ನೂ ಒಂದಷ್ಟು ಶಾಲೆಗಳಲ್ಲಿ ದಾನಿಗಳು ಸಿಗದೆ ಪೋಷಕರಿಗೇ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿವೆ.

ಪ್ರತಿ ವಿದ್ಯಾರ್ಥಿಗೆ ಗುಣಮಟ್ಟ ಶೂ, ಸಾಕ್ಸ್‌ ಖರೀದಿಸಿಬೇಕಾದರೆ ಸರ್ಕಾರ ನೀಡುತ್ತಿರುವ ಹಣದ ಜೊತೆಗೆ ತಲಾ 100 ರು.ವರೆಗೆ ಹೆಚ್ಚುವರಿ ಹಣ ನೀಡುವಂತೆ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಪೋಷಕರ ಬಳಿಕ ಶಾಲಾ ಮುಖ್ಯಶಿಕ್ಷಕರು, ಎಸ್‌ಡಿಎಂಸಿಗಳ ಪ್ರತಿನಿಧಿಗಳು ಕೋರುತ್ತಿರುವುದು ರಾಜ್ಯದ ವಿವಿಧ ಶಾಲೆಗಳಲ್ಲಿ ಕಂಡುಬರುತ್ತಿದೆ.

2015-16ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ, ಸಾಕ್ಸ್‌ ಭಾಗ್ಯ ಘೋಷಿಸಿ ಜಾರಿಗೆ ತಂದಿತ್ತು. 2017-18ನೇ ಸಾಲಿನಲ್ಲಿ ಕೊಂಚ ದರ ಪರಿಷ್ಕರಿಸಿದ್ದು ಬಿಟ್ಟರೆ ಎಂಟು ವರ್ಷಗಳ ಹಿಂದಿನ ದರದಲ್ಲೇ ಪ್ರತಿತಿಷ್ಠಿತ ಬ್ರಾಂಡೆಡ್‌ ಕಂಪನಿಗಳ ಅಧಿಕೃತ ಸರಬರಾಜುದಾರರಿಂದ ಗುಣಮಟ್ಟದ ಶೂ, ಸಾಕ್ಸ್‌ಗಳನ್ನೇ ಖರೀದಿಸಿ ನೀಡಬೇಕೆಂಬ ನಿಬಂಧನೆ ವಿಧಿಸಿದೆ. ಖರೀದಿಯ ಹೊಣೆಯನ್ನು ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ವಹಿಸಿ ಅವುಗಳ ಜಂಟಿ ಖಾತೆಗೆ ನೇರ ಹಣ ಬಿಡುಗಡೆ ಮಾಡುತ್ತಿರುವುದರಿಂದ ಸಮಿತಿಗಳ ಪ್ರತಿನಿಧಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ.

ಸರ್ಕಾರ ವಿಧಿಸಿರುವ ನಿಬಂಧನೆ ಪ್ರಕಾರ, ಶೂಗಳ ಮೇಲ್ಪದರ ಪಾಲಿವಿನೈಲ್‌(ಪಿವಿಸಿ) ಕೋಟೆಡ್‌ ವಿಸ್ಕೋಸ್‌/ಪಾಲಿಯೆನ್ಸರ್‌/ಪಾಲಿಯೆಸ್ಟರ್‌ ಕಾಟನ್‌ ಫ್ಯಾಬ್ರಿಕ್‌ 1.5 ಎಂಎಂ ಹೊಂದಿದ ಮತ್ತು ಎಕ್ಸ್‌ಟೆಂಡೆಡ್‌ ಪಾಲಿವಿಲೈನ್‌ ಕ್ಲೋರೈಡ್‌ ಸೋಲ್‌ ಹೊಂದಿರಬೇಕು. ಪಾದರಕ್ಷೆ ಖರೀದಿಸುವುದಾದರೆ ಅವುಗಳ ಒಳಪದರ ಅಂದಾಜು 0.8 ಎಂಎಂ ದಪ್ಪದ ಬಟ್ಟೆ/ಫ್ಯಾಬ್ರಿಕ್‌ನಿಂದ ಕೂಡಿರಬೇಕು. ವೆಲ್‌ಕ್ರೋ ಪಾದರಕ್ಷೆಗಳನ್ನು ಮತ್ತು ಲೈನಿಂಗ್‌ ಸಾಕ್ಸ್‌ ಖರೀದಿಸಿ ವಿತರಿಸಬೇಕು. ಅಲ್ಲದೆ, ಖರೀದಿಸುವಾಗ ಪಾರದರ್ಶಕ ಅಧಿನಿಯಮ 1999ರ ಹಾಗೂ ಅದರಡಿ ಹೊರಡಿಸಿರುವ ನಿಯಮಗಳನ್ನು ಚಾಚೂತಪ್ಪದೆ ಕಡ್ಡಾಯವಾಗಿ ಪಾಲಿಸಬೇಕೆಂದು ಸರ್ಕಾರ ಸೂಚಿಸಿದೆ.

ಆದರೆ, ಸರ್ಕಾರ ಪ್ರತಿ ವಿದ್ಯಾರ್ಥಿಯ ಶೂ, ಸಾಕ್ಸ್‌ ಖರೀದಿಗೆ ತರಗತಿವಾರು ಕನಿಷ್ಠ 265 ರು.ನಿಂದ ಗರಿಷ್ಠ 325 ರು.ವರೆಗೆ ಹಣ ನೀಡುತ್ತಿದೆ. ಮುಕ್ತ ಮಾರುಕಟ್ಟೆಯಲ್ಲೇ ಒಂದು ಜೊತೆ ಗುಣಮಟ್ಟದ ಶೂ ಬೆಲೆ 500 ರು. ಇದೆ. ಇಂಧನ ಬೆಲೆ ಏರಿಕೆಯಿಂದ ಸರಕು ಸಾಗಣೆ ದರ ಪ್ರತಿ ವರ್ಷ ಏರುತ್ತಿರುತ್ತದೆ. ಹೀಗಿರುವಾಗ ಹೆಚ್ಚುವರಿ ಅನುದಾನಕ್ಕೆ ದಾನಿಗಳು ಸಿಗದಿದ್ದರೆ, ಪೋಷಕರು ಒಪ್ಪದಿದ್ದರೆ ಏನು ಮಾಡಬೇಕೆಂಬ ಆತಂಕ ಎಸ್‌ಡಿಎಂಸಿ ಪ್ರತಿನಿಧಿಗಳು ಮತ್ತು ಮುಖ್ಯಶಿಕ್ಷಕರಲ್ಲಿ ಮನೆ ಮಾಡಿದೆ.

ಯಾವ ತರಗತಿಗೆ ಎಷ್ಟು ದರ?

ಸರ್ಕಾರಿ ಶಾಲೆಗಳಲ್ಲಿನ 1ರಿಂದ 10ನೇ ತರಗತಿ ವರೆಗಿನ ಸುಮಾರು 40.68 ಲಕ್ಷ ಮಕ್ಕಳಿಗೆ 2025-26ನೇ ಸಾಲಿನಲ್ಲಿ ತಲಾ ಒಂದು ಜೊತೆ ಕಪ್ಪುಬಣ್ಣದ ಶೂ, ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್‌ ಖರೀದಿಗೆ ವಿದ್ಯಾವಿಕಾಸ ಯೋಜನೆ ಅನುದಾನದಲ್ಲಿ 111.88 ಕೋಟಿ ರು. ಅನುದಾನ ಬಳಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳ ಶೂ, ಸಾಕ್ಸ್‌ ಖರೀದಿಗೆ ತಲಾ 265 ರು., 6ರಿಂದ 8ನೇ ತರಗತಿ ಮಕ್ಕಳಿಗೆ 295 ರು., 9 ಮತ್ತು 10ನೇ ತರಗತಿ ಮಕ್ಕಳಿಗೆ 325 ರು. ದರ ನಿಗದಿಪಡಿಸಲಾಗಿದೆ.

ಎಂಟು ವರ್ಷಗಳ ಹಿಂದಿನ ಈ ದರದಲ್ಲಿ ಹೆಸರಾಂತ ಬ್ರಾಂಡೆಂಡ್‌ ಕಂಪನಿಯ ಶೂ, ಸಾಕ್ಸ್‌ ಖರೀದಿ ಅಸಾಧ್ಯ. ಈ ಬಗ್ಗೆ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡಲು ಸಾಧ್ಯವಿಲ್ಲ. ಸರ್ಕಾರ ಕೊಟ್ಟ ಹಣದಲ್ಲೇ ಶೂ, ಸಾಕ್ಸ್‌ ಖರೀದಿಸಿದರೆ ಮೂರು ತಿಂಗಳೂ ಬರುವುದಿಲ್ಲ. ಹಾಗಾಗಿ ಅನಿವಾರ್ಯವಾಗಿ ದಾನಿಗಳು, ಪೋಷಕರಿಂದ ಹೆಚ್ಚುವರಿ ಅನುದಾನ ಪಡೆಯಬೇಕಾಗಿದೆ ಎನ್ನುತ್ತಾರೆ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳ ಹೆಸರು ಹೇಳಲಿಚ್ಛಿಸದ ಎಸ್‌ಡಿಎಂಸಿಗಳ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರು.

ಅಧಿಕಾರಿಗಳು ಏನಂತಾರೆ?

ಪ್ರತಿ ಶಾಲೆಯಲ್ಲೂ ಎಲ್ಲ ಮಕ್ಕಳಿಗೂ ಒಂದೇ ಕಂಪನಿಯ ಶೂ, ಸಾಕ್ಸ್‌ಗಳನ್ನು ಸಗಟು ದರದಲ್ಲಿ ಖರೀದಿಸುವುದರಿಂದ ದರ ಕಡಿಮೆಯಾಗುತ್ತದೆ. ಪಾದದ ಅಳತೆಗೆ ತಕ್ಕಂತೆ ಬೇರೆ ಬೇರೆ ಶ್ರೇಣಿಯ ಶೂ, ಸಾಕ್ಸ್‌ ಖರೀದಿಸುವುದರಿಂದ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಗುಣಮಟ್ಟದ ಶೂ, ಸಾಕ್ಸ್‌ ಖರೀದಿ ಸಾಧ್ಯವಿದೆ. ಹಾಗಾಗಿ ದರ ಪರಿಷ್ಕರಣೆ ಅಗತ್ಯವಿಲ್ಲ ಎಂದು ಪರಿಗಣಿಸಿ ಹಳೆಯ ದರವನ್ನೇ ಮುಂದುವರೆಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಹೇಳುತ್ತಾರೆ.

Read more Articles on