ಸಾರಾಂಶ
- ಸರ್ಕಾರಿ ಸೌಲಭ್ಯ ವಿತರಣೆಯಲ್ಲಿ ಅನ್ಯಾಯ: ಅಧಿಕಾರಿಗಳ ವಿರುದ್ಧ ಹರಿಹಾಯ್ದ ಮಾಯಕೊಂಡ ಶಾಸಕ । ಜಿಪಂ ಸಭಾಂಗಣದಲ್ಲಿ ತಾಪಂ ಕೆಡಿಪಿ ಸಭೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಕೊಳವೆಬಾವಿ ಕೊರೆಸಿದ ರೈತರಿಗೆ ಹಳೆಯ ಟ್ರಾನ್ಸ್‌ಫಾರ್ಮರ್ ನೀಡಿ, ಮತ್ತೊಬ್ಬ ರೈತನಿಗೆ ಕೊಡಬೇಕಾದ ಟ್ರಾನ್ಸ್‌ಫಾರ್ಮರ್‌ನ್ನು ಮತ್ತೊಬ್ಬರಿಗೆ ಮಾರಾಟ ಮಾಡಿ, ಅರ್ಹ ರೈತರಿಗೆ ಸರ್ಕಾರಿ ಸೌಲಭ್ಯ ವಂಚಿಸಿದ ಬಗ್ಗೆ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ 2024- 2025ನೇ ಸಾಲಿನ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಂದಗಲ್ಲು ಗ್ರಾಮದ ರೈತ ಗಂಗಾಧರಪ್ಪ ಅವರಿಗೆ ಆದಿಜಾಂಬವ ಅಭಿವೃದ್ಧಿ ನಿಗಮದಡಿ ಕೊಳವೆಬಾವಿ ಕೊರೆಸಲಾಗಿದೆ. ಆ ರೈತನಿಗೆ ಪಂಪ್‌ಸೆಟ್, ಪೈಪ್ ಸೇರಿ, ಎಲ್ಲ ಪರಿಕರಗಳನ್ನು ನೀಡಿದ್ದಾರೆ. ಆದರೆ, ಹೊಸ ಟ್ರಾನ್ಸ್‌ಫಾರ್ಮರ್ (ಟಿಸಿ) ನೀಡದೇ ಹಳೆಯ ಟಿಸಿ ಕೊಟ್ಟು ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ ಎಂದರು.ಹುಲಿಕಟ್ಟೆ ಗ್ರಾಮದ ರೈತ ಚನ್ನಬಸಪ್ಪ ಅವರಿಗೆ ಕೊಳವೆಬಾವಿ ಕೊರೆಸಿ, 3 ವರ್ಷದ ನಂತರ ಪಂಪ್‌ಸೆಟ್, ಪೈಪ್ ನೀಡಲಾಗಿದೆ. ಚನ್ನಬಸಪ್ಪಗೆ ನೀಡಬೇಕಾದ ಟಿಸಿ ಬೇರೆಯವರಿಗೆ ಕೊಟ್ಟು, ಇಂದಿಗೂ ರೈತನನ್ನು ಕಚೇರಿಯಿಂದ ಕಚೇರಿಗಳಿಗೆ ಅಲೆಯುವಂತೆ ಮಾಡಲಾಗಿದೆ. ಇದಕ್ಕೆ ಯಾರು ಹೊಣೆ? ರೈತರಿಗೆ ಸರ್ಕಾರ ನೀಡಿದ ಸೌಲಭ್ಯಗಳನ್ನು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡವರು ಯಾರು ಎಂದು ಅಧಿಕಾರಿಗಳ ವಿರುದ್ಧ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಆಡಳಿತಾಧಿಕಾರಿ, ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ತಾಪಂ ಇಒ ರಾಮಭೋವಿ ಈ ಕುರಿತು ಮಾತನಾಡಿ, ತಕ್ಷಣವೇ ಇಂತಹ ಘಟನೆಗಳ ಬಗ್ಗೆ ತನಿಖೆ ಮಾಡಿ, ವಾರದೊಳಗಾಗಿ ಸಂಬಂಧಿಸಿದ ಅಧಿಕಾರಿಗಳು ವಸ್ತುನಿಷ್ಠವಾಗಿ ಪರಿಶೀಲನೆ ನಡೆಸಿ, ವರದಿ ನೀಡಬೇಕು. ಅರ್ಹ ರೈತರಿಗೆ ಸಿಗಬೇಕಾದ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಅಧಿಕಾರಿಗಳು, ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ತಿಳಿಸಿದರು.ಶಾಸಕ ಬಸವಂತಪ್ಪ ಮಾತನಾಡಿ, ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಯಲ್ಲಿ ನರೇಗಾದಡಿ ಕೈಗೊಂಡ ನೆಡುತೋಪು, ರಸ್ತೆ ಬದಿ, ಇಂಗುಗುಂಡಿ ನಿರ್ಮಾಣದಲ್ಲಿ ಕೋಟ್ಯಂತರ ರು. ಖರ್ಚು ಮಾಡಲಾಗಿದೆ. ಆದರೆ, ಅಧಿಕಾರಿಗಳು ಮಾಡಿರುವ ಕಾಮಗಾರಿ ಮಾತ್ರ ಎಲ್ಲಿಯೂ ಭೌತಿಕವಾಗಿ ಕಾಣುತ್ತಿಲ್ಲ. ದಾಖಲೆಗಳಲ್ಲಿ ಮಾತ್ರ ಅವೆಲ್ಲವೂ ಸ್ಪಷ್ಟವಾಗಿದೆ. ಈ ಬಗ್ಗೆ ತಾಪಂ ಆಡಳಿತಾಧಿಕಾರಿ, ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ತಮಗೆ ವರದಿ ನೀಡಬೇಕು ಎಂದು ಆದೇಶಿಸಿದರು.
ನರೇಗಾದಡಿ ಚೆಕ್ ಡ್ಯಾಂ, ಬದು ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಬೇಕು. ರೈತರಿಂದ ಯಾವುದೇ ದೂರು ಬಾರದಂತೆ ನೋಡಿಕೊಳ್ಳಿ ಎಂದು ಕೃಷಿ ಇಲಾಖೆ ಅಧಿಕಾರಿಗೆ ಶಾಸಕರು ಸೂಚಿಸಿದರು. ಕೃಷಿ ಅಧಿಕಾರಿ ಸ್ಪಂದಿಸಿ, ಈ ಬಾರಿ ಉತ್ತಮ ಮುಂಗಾರು ಆರಂಭದಿಂದ ಬಿತ್ತನೆಗೆ ಯಾವುದೇ ತೊಂದರೆಯಾಗಿಲ್ಲ. ಅಲ್ಲದೇ, ಭದ್ರಾ ಜಲಾಶಯ ಭರ್ತಿಯಿಂದ ಭತ್ತ ಬೆಳೆಯುವುದಕ್ಕೆ ತೊಂದರೆ ಇಲ್ಲ. ಈಗಾಗಲೇ ಭತ್ತ ನಾಟಿಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆಬೀಜ, ರಸಗೊಬ್ಬರಕ್ಕೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.ಕೃಷಿಭಾಗ್ಯ ಯೋಜನೆಯಡಿ ಆನಗೋಡು 38, ಮಾಯಕೊಂಡ 26 ಸೇರಿದಂತೆ ಒಟ್ಟು 84 ರೈತರಿಗೆ ಕೃಷಿ ಹೊಂಡದ ಸೌಲಭ್ಯ ಕಲ್ಪಿಸಲಾಗಿದೆ. ಪ್ರಸಕ್ತ ಕೃಷಿ ಯಂತ್ರೋಪಕರಣ ವಿತರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಕೃಷಿ ಅಧಿಕಾರಿ ಹೇಳಿದರು. ತೋಟಗಾರಿಕೆ ಅಧಿಕಾರಿ ಮಾತನಾಡಿ, ರೈತರು ತೋಟಗಳಲ್ಲಿ ಕೃಷಿಹೊಂಡ ಯಾವ ರೀತಿ ನಿರ್ಮಿಸಿಕೊಳ್ಳಬೇಕೆಂದು ತರಬೇತಿ ನೀಡಲಾಗುತ್ತಿದೆ. ದೊಡ್ಡ ಮತ್ತು ಸಣ್ಣ ಟ್ರ್ಯಾಕ್ಟರ್‌ಗಳಿಗೆ ಸಾಕಷ್ಟು ಅರ್ಜಿ ಬಂದಿವೆ. ಎಸ್ಸಿ-ಎಸ್ಟಿ ಮತ್ತು ಸಾಮಾನ್ಯರಿಗೆ ಒಟ್ಟು ಶೇ.17ರಷ್ಟು ಕೊಡಲು ಅವಕಾಶ ಇದೆ. ಆದರೆ, 60-70 ಅರ್ಜಿಗಳು ಬಂದಿವೆ. ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು. ಆಗ ಶಾಸಕ ಬಸವಂತಪ್ಪ, ಹೆಚ್ಚುವರಿ ಟ್ರ್ಯಾಕ್ಟರ್‌ಗಳನ್ನು ಕೊಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ತಹಸೀಲ್ದಾರ್ ಡಾ.ಅಶ್ವಥ್, ತಾಲೂಕುಮಟ್ಟದ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿದ್ದರು.- - -
ಬಾಕ್ಸ್-1 * ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಿಸಲು ಸೂಚನೆದಾವಣಗೆರೆ: ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ದಾವಣಗೆರೆ ಉತ್ತರ-ದಕ್ಷಿಣ ವಲಯ ಬಿಇಒಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಮಟ್ಟ ತಿಳಿಯಬೇಕು. ಶಿಕ್ಷಕರು ಬೆಳಿಗ್ಗೆ, ಸಂಜೆ ಸಹಿ ಒಂದೇ ಸಲ ಮಾಡುವುದೆಲ್ಲಾ ತಾವು ವಿವಿಧ ಶಾಲೆಗಳಿಗೆ ಭೇಟಿ ನೀಡಿದ್ದ ವೇಳೆ ಕಂಡುಬಂದಿದೆ. ಅಂಥವರ ಬಗ್ಗೆ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದರು. ಶಾಸಕರ ಪ್ರಶ್ನೆಗೆ ತಬ್ಬಿಬ್ಬಾದ ದಕ್ಷಿಣ ವಲಯದ ಬಿಇಒ, ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.ಬಸವಂತಪ್ಪ ಮಾತನಾಡಿ, ಗ್ರಾಮೀಣ ಮನೆ, ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಈಚೆಗೆ ಇಬ್ಬರು ಮದ್ಯವ್ಯಸನಿಗಳು ಜಗಳವಾಡುತ್ತ ರಸ್ತೆಗೆ ಬಂದ ಪರಿಣಾಮ ಲಾರಿ ಡಿಕ್ಕಿಯಾಗಿ ಓರ್ವನ ಸಾವು ಸಂಭವಿಸಿದೆ. ಮದ್ಯ ಸೇವಿಸಿದವರಿಂದ ಪ್ರತಿನಿತ್ಯ ಗಲಾಟೆ ಹೆಚ್ಚಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಶಾಸಕರು ತಾಕೀತು ಮಾಡಿದರು.
- - -ಬಾಕ್ಸ್-2 * ಅನುಪಾಲನಾ ವರದಿ ತಾರದ ಅಧಿಕಾರಿಗಳು
ದಾವಣಗೆರೆ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದಿದ್ದು, ಸಭೆಗೆ ಹಾಜರಾಗಿದ್ದ ಬಹುತೇಕ ಅಧಿಕಾರಿಗಳು ಅನುಪಾಲನಾ ವರದಿ ಇಲ್ಲದೆ ಕೈಬೀಸಿಕೊಂಡು ಬಂದಿದ್ದರು. ಇದರಿಂದ ಅಸಮಾಧಾನಗೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಕಳೆದ ಸಭೆಯಲ್ಲಿ ನಡೆದ ವಿಷಯಗಳ ಕುರಿತು ವರದಿ ಇಲ್ಲದೇ ಸಭೆಗೆ ಬಂದು ಪ್ರಗತಿ ಬಗ್ಗೆ ಕೇಳಿದರೆ ಇಲ್ಲವೆಂದರೆ ಅಧಿಕಾರಿಗಳ ಜವಾಬ್ದಾರಿ ಎಷ್ಟಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದರು.ಹಾಗಾದರೆ ಶಾಸಕರಿಗೆ ಅಧಿಕಾರಿಗಳಾದ ನೀವು ಕೊಡುವ ಗೌರವ ಇದೇನಾ ಎಂದು ಕೆಂಡಾಮಂಡಲರಾದರು. ಆಡಳಿತಾಧಿಕಾರಿ ಕೃಷ್ಣನಾಯ್ಕ್, ಇಒ ರಾಮಭೋವಿ, ಮುಂದಿನ ಸಭೆಗೆ ಕಡ್ಡಾಯವಾಗಿ ಅನುಪಾಲನಾ ವರದಿಯೊಂದಿಗೆ ಹಾಜರಾಗಬೇಕು. ಇಲ್ಲದಿದ್ದರೆ ಅನುಪಾಲನಾ ವರದಿ ತರದ ನಿಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಜಿಪಂ ಡಿಎಸ್, ತಾಪಂ ಇಒಗೆ ಎಚ್ಚರಿಕೆ ನೀಡಿದರು.
- - -ಕೋಟ್ ದಾವಣಗೆರೆ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗದ ಅಂಬೇಡ್ಕರ್, ವಾಲ್ಮೀಕಿ, ತಾಂಡಾ, ಅಲ್ಪಸಂಖ್ಯಾತ ಹಾಗೂ ಭೋವಿ ಅಭಿವೃದ್ಧಿ ನಿಗಮಗಳ ಅಧಿಕಾರಿಗಳಿಗೆ ತಾಪಂ ಇಒ ರಾಮಭೋವಿ ಅವರು ತಕ್ಷಣವೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು
- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ- - - -13ಕೆಡಿವಿಜಿ9, 10, 11:
ದಾವಣಗೆರೆ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಯಕೊಂಡ ಶಾಸಕ ಬಸವಂತಪ್ಪ ವಿವಿಧ ಅಭಿವೃದ್ಧಿ ಯೋಜನೆ, ಕಾರ್ಯಕ್ರಮ, ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.