ಮಂಗಳೂರಿಗೆ ಬಂತು ಹಳೆ ಸಮರ ಟ್ಯಾಂಕ್‌

| Published : Aug 05 2025, 11:47 PM IST

ಸಾರಾಂಶ

ಪೂನಾದ ಕಿರ್ಕಿ ಎಂಬಲ್ಲಿನ ಡಿಪೋದಿಂದ ವಿಶೇಷ ಟ್ರೈಲರ್‌ ಟ್ರಕ್‌ನಲ್ಲಿ 40 ಟನ್‌ ತೂಕದ ಈ ಟಿ-55 ಟ್ಯಾಂಕ್‌ ಶುಕ್ರವಾರ ಹೊರಟಿದ್ದು, ಮೂರು ದಿನದ ಪ್ರಯಾಣದ ಬಳಿಕ ಮಂಗಳೂರು ತಲಪಿದೆ.

ವೀರ ಯೋಧರ ಸೇವೆ ಗುರುತಿಸಲು, ವಿಶೇಷ ಆಕರ್ಷಣೆಯಾಗಿ ಈ ಟ್ಯಾಂಕ್‌ ಪ್ರದರ್ಶನ

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತ- ಪಾಕಿಸ್ತಾನದ 1965, 1971ನೇ ಯುದ್ಧಗಳಲ್ಲಿ ಪಾಲ್ಗೊಂಡ ಹಳೆಯ ಯುದ್ಧ ಟ್ಯಾಂಕ್‌ ಟಿ-55 ಮಂಗಳೂರು ತಲುಪಿದೆ. ಮಂಗಳೂರಿಗೆ ವಿಶೇಷ ಆಕರ್ಷಣೆಯಾಗಿ ಹಾಗೂ ವೀರ ಯೋಧರ ಸೇವೆ ಗುರುತಿಸಿ, ಸೇನೆ ಸೇರುವುದಕ್ಕೆ ಸ್ಫೂರ್ತಿಯಾಗಿ ಈ ಯುದ್ಧ ಟ್ಯಾಂಕ್‌ ಅನ್ನು ಪ್ರದರ್ಶಿಸುವ ಉದ್ದೇಶ ಹಾಕಿಕೊಳ್ಳಲಾಗಿದೆ.

ಪೂನಾದ ಕಿರ್ಕಿ ಎಂಬಲ್ಲಿನ ಡಿಪೋದಿಂದ ವಿಶೇಷ ಟ್ರೈಲರ್‌ ಟ್ರಕ್‌ನಲ್ಲಿ 40 ಟನ್‌ ತೂಕದ ಈ ಟಿ-55 ಟ್ಯಾಂಕ್‌ ಶುಕ್ರವಾರ ಹೊರಟಿದ್ದು, ಮೂರು ದಿನದ ಪ್ರಯಾಣದ ಬಳಿಕ ಮಂಗಳೂರು ತಲಪಿದೆ.ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಈ ಟ್ಯಾಂಕ್‌ನ್ನು ತರಿಸಿದ್ದು, ಅದರ ನಿರ್ವಹಣೆಯನ್ನು ಪಾಲಿಕೆಯೇ ನೋಡಿಕೊಳ್ಳಲಿದೆ.

ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿ ಪಡೆದ ಟ್ಯಾಂಕ್‌ ಮತ್ತಿತರ ಸೇನೆಯ ಆಯುಧಗಳನ್ನು ವಾರ್‌ ಟ್ರೋಫಿ (ಯುದ್ಧ ಸ್ಮರಣಿಕೆ) ರೀತಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೇ ರೀತಿ ಮಂಗಳೂರಿಗೆ ಟ್ಯಾಂಕ್‌ನ್ನು ನೀಡುವಂತೆ ರಕ್ಷಣಾ ಸಚಿವಾಲಯಕ್ಕೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮನವಿ ಸಲ್ಲಿಸಿದ್ದರು, ಅದಕ್ಕೆ ಅನುಮೋದನೆ ಸಿಕ್ಕಿದ್ದು, ಟ್ಯಾಂಕ್‌ ಕೂಡ ಆಗಮಿಸಿದೆ.

ಪ್ರಸ್ತುತ ಇದನ್ನು ಸರ್ಕ್ಯೂಟ್‌ ಹೌಸ್‌ ಬಳಿ ಇರಿಸಲಾಗಿದೆ, ಮುಂದೆ ಕದ್ರಿ ಯುದ್ಧ ಸ್ಮಾರಕದ ಬಳಿ ಸೂಕ್ತ ವೇದಿಕೆಯನ್ನು ನಿರ್ಮಿಸಿ ಅದರಲ್ಲಿ ಟ್ಯಾಂಕ್‌ ಇರಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.