ಹಾವೇರಿ: ಮಹಾಶಿವರಾತ್ರಿ ನಿಮಿತ್ತ ಜಿಲ್ಲಾದ್ಯಂತ ಶಿವನ ದೇವಾಲಯಗಳಲ್ಲಿ, ಭಕ್ತರ ಮನಗಳಲ್ಲಿ ಓಂ ನಮಃ ಶಿವಾಯ, ಹರಹರ ಮಹಾದೇವ ಮಂತ್ರ ಅನುರಣಿಸಿದವು. ಜಿಲ್ಲೆಯ ಶಿವ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿಯನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಾವಿರಾರು ಭಕ್ತರು ಶಿವನ ದರ್ಶನ ಪಡೆದು ಪುನೀತರಾದರು. ಮಹಾ ಶಿವರಾತ್ರಿ ಅಂಗವಾಗಿ ಜಿಲ್ಲಾದ್ಯಂತ ಶಿವ ದೇವಾಲಯಗಳಲ್ಲಿ ಗಂಟೆ ಜಾಗಟೆ ಸದ್ದು ಜೋರಾಗಿತ್ತು. ಮಂತ್ರಗಳ ಉದ್ಘೋಷ, ಭಜನೆ, ಓಂ ನಮಃ ಶಿವಾಯ ಶಿವನಾಮ ಸ್ಮರಣೆ, ಪೂಜೆ ಪುನಸ್ಕಾರ ಕೈಗೊಂಡು ಶಿವರಾತ್ರಿ ಜಾಗರಣೆಯಲ್ಲಿ ತೊಡಗಿದ್ದರು.ಹಾವೇರಿ ನಗರ, ಗ್ರಾಮೀಣ ಭಾಗ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೇ ಎಲ್ಲಾ ಶಿವಾಲಯಗಳಲ್ಲಿ ರುದ್ರಾಭಿಷೇಕ, ಮಹಾ ರುದ್ರಾಭಿಷೇಕ, ಭಸ್ಮಾಭಿಷೇಕ, ತುಪ್ಪದಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಫಲ ಪುಷ್ಪಾಭಿಷೇಕ ಸಮರ್ಪಣೆಯ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪ್ರಮುಖವಾಗಿ ಸ್ಥಳೀಯ ಬಸವೇಶ್ವರನಗರದ ಸಿ ಬ್ಲಾಕ್‌ನಲ್ಲಿರುವ ಶ್ರೀ ಗಜಾನನ ಮತ್ತು ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ತರಹೇವಾರಿ ಹೂಗಳು, ತಳಿರು ತೋರಣಗಳಿಂದ ಶೃಂಗರಿಸಲಾಗಿದ್ದ ದ್ವಾದಶ ಜ್ಯೋತಿರ್ಲಿಂಗಗಳಿಗೆ ಪ್ರಧಾನ ಅರ್ಚಕ ಫಕ್ಕೀರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಶಿವರಾತ್ರಿ ಮಹಾರುದ್ರಾಭಿಷೇಕ ಕಾರ್ಯಕ್ರಮ ಜರುಗಿತು. ಆವರಣದಲ್ಲಿರುವ ಶ್ರೀ ಗಜಾನನ, ಶ್ರೀ ಆಂಜನೇಯ, ನವಗ್ರಹ ಮೂರ್ತಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿದೇವಿ ಮೂರ್ತಿಗಳಿಗೆ ರುದ್ರಾಭಿಷೇಕ ಸಮರ್ಪಿಸಲಾಯಿತು. ಮಹಾ ಮಂಗಳಾರತಿಗೆ ಆಗಮಿಸಿದ್ದ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮುತ್ತೈದೆಯರು ಪೂರ್ಣಕುಂಭ ಹೊತ್ತು ಸ್ವಾಗತಿಸಿದರು. ಶಿವನ ಮೂರ್ತಿಗೆ ಜಲಾಭಿಷೇಕವನ್ನು ನೆರವೇರಿಸಿ ಪುಷ್ಪನಮನ ಸಲ್ಲಿಸಿದರು.ಅಲ್ಲದೇ ಅಶ್ವಿನಿ ನಗರದಲ್ಲಿರುವ ಶಿವನಮೂರ್ತಿಗೆ ವಿವಿಧ ಬಗೆಯ ಹೂವುಗಳಿಂದ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಗರದ ಗುತ್ತಲ ರಸ್ತೆಯಲ್ಲಿರುವ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಪುರಸಿದ್ದೇಶ್ವರನಿಗೆ ಮಹಾರುದ್ರಾಭಿಷೇಕ ಕಾರ್ಯಕ್ರಮ ಜರುಗಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಈಶ್ವರ ಲಿಂಗುಗಳ ಮೆರವಣಿಗೆ ಸಹ ಅರ್ಥಪೂರ್ಣವಾಗಿ ನಡೆಯಿತು.ಶಿವರಾತ್ರಿ ಅಂಗವಾಗಿ ಭಕ್ತರು ತಂಡೋಪತಂಡವಾಗಿ ದೇವಸ್ಥಾನಗಳಿಗೆ ತೆರಳಿ ಶಿವನ ದರ್ಶನವನ್ನು ಪಡೆದು ಪುನೀತರಾದರು. ಶಿವನ ದರ್ಶನಕ್ಕೆ ಆಗಮಿಸಿದ ಭಕ್ತ ವೃಂದಕ್ಕೆ ದೇವಸ್ಥಾನ ವತಿಯಿಂದ ಅಲ್ಪೋಪಹಾರ ವಿತರಿಸಲಾಗುತ್ತಿತ್ತು. ಒಟ್ಟಾರೆಯಾಗಿ ಮಹಾಶಿವರಾತ್ರಿ ಅಂಗವಾಗಿ ಇಡೀ ದಿನ ಶಿವನಾಮ ಸ್ಮರಣೆಯಲ್ಲಿ ಜಿಲ್ಲೆಯ ಜನತೆ ತಲ್ಲೀನರಾಗಿದ್ದರು.ಶಿವರಾತ್ರಿ ಬಹಳ ಪವಿತ್ರ ದಿನವಾಗಿದೆ: ಬಸವೇಶ್ವರನಗರ ಸಿ ಬ್ಲಾಕ್‌ನಲ್ಲಿರುವ ಶ್ರೀ ಗಜಾನನ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ, ಶಿವರಾತ್ರಿ ಬಹಳ ಪವಿತ್ರದಿನವಾಗಿದೆ. ವಿಷ್ಣುವಿಗೆ ಅಲಂಕಾರ ಎಂದರೆ ಪ್ರೀತಿ, ಶಿವನಿಗೆ ಅಭಿಷೇಕ ಎಂದ್ರೆ ಪ್ರೀತಿ, ಇವುಗಳನ್ನು ಮಾಡಿದಾಗ ಶಿವ ಸಂತೃಪ್ತನಾಗುತ್ತಾನೆ. ಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂಸ್ಕೃತಿಯಾಗಿದೆ, ಭಾರತ ಆಧ್ಯಾತ್ಮಕ್ಕೆ ಪ್ರಸಿದ್ದಿಯಾಗಿದೆ. ಪ್ರತಿಯೊಬ್ಬರು ಶಿವನನ್ನು ಪೂಜಿಸಬೇಕು. ಶಿವನಾಮ ಸ್ಮರಣೆ ಮಾಡಿದರೆ ಎಲ್ಲಾ ಪಾಪಗಳು ನಿವಾರಣೆಯಾಗುತ್ತವೆ. ಪರಮಾತ್ಮನ ಸ್ಮರಣೆಗೈದರೆ ನಾಲ್ಕು ವೇದಗಳನ್ನು ಪಠಣ ಮಾಡಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ. ದೇವಸ್ಥಾನದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಿಗೆ ಪೂಜಿಸಿದ್ದು ಸಹ ಪುಣ್ಯದ ಕೆಲಸವಾಗಿದೆ. ಸಂಸ್ಕೃತಿ, ಸಂಸ್ಕಾರ, ಶಾಂತಿ ಸಿಗಬೇಕಾದರೆ ಶಿವನಾಮ ಸ್ಮರಣೆ ಮಾಡಬೇಕು. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವುದರ ಜತೆಗೆ ಹಿರಿಯರನ್ನು ಗೌರವಿಸುವ ಮತ್ತು ಪ್ರೀತಿಸುವ ಸಂಸ್ಕಾರ ಕಲಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಹಾವೇರಿ ಜಿಲ್ಲಾದ್ಯಂತ ಅನುರಣಿಸಿದ ಓಂ ನಮಃ ಶಿವಾಯ
ಮಹಾಶಿವರಾತ್ರಿ ನಿಮಿತ್ತ ಜಿಲ್ಲಾದ್ಯಂತ ಶಿವನ ದೇವಾಲಯಗಳಲ್ಲಿ, ಭಕ್ತರ ಮನಗಳಲ್ಲಿ ಓಂ ನಮಃ ಶಿವಾಯ, ಹರಹರ ಮಹಾದೇವ ಮಂತ್ರ ಅನುರಣಿಸಿದವು. ಜಿಲ್ಲೆಯ ಶಿವ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿಯನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಾವಿರಾರು ಭಕ್ತರು ಶಿವನ ದರ್ಶನ ಪಡೆದು ಪುನೀತರಾದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.