ಗ್ರಾಮಸಭೆಯಲ್ಲಿ ಮಂಡಿಸಿದ ಕಾಮಗಾರಿಗಳ ಲೆಕ್ಕದಲ್ಲಿ ಲೋಪ

| Published : Oct 31 2024, 12:45 AM IST

ಸಾರಾಂಶ

ಗ್ರಾಮಸಭೆಯಲ್ಲಿ ಮಂಡಿಸಿದಂತಹ ಹಲವಾರು ಕಾಮಗಾರಿಗಳ ಲೆಕ್ಕದಲ್ಲಿ ಲೋಪವಿದೆ ಎಂದು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 15ನೇ ಹಣಕಾಸು ಯೋಜನೆ ಅಡಿಯಲ್ಲಿ ಕೈಗೊಂಡಂತಹ ಕುಡಿಯುವ ನೀರು, ವಿದ್ಯುತ್ ದೀಪ, ಮೋಟಾರ್ ದುರಸ್ತಿ, ಚರಂಡಿ ನಿರ್ಮಾಣ ಹಾಗೂ ಹಲವಾರು ಪರಿಕರಗಳ ಖರೀದಿಯಲ್ಲಿ ಲೋಪವಿದ್ದು ಸದರಿ ಅಂಶಗಳ ಲೆಕ್ಕವನ್ನು ಪರಿಶೀಲನೆ ನಡೆಸುವಂತೆ ಹಾಗೂ ತನಿಖೆ ನಡೆಸುವಂತೆ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೆಲ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬಾಣಾವರದ ಗ್ರಾಮ ಪಂಚಾಯಿತಿ ಆವರಣದಲ್ಲಿ 2023 -24ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಗ್ರಾಮಸಭೆಯಲ್ಲಿ ಮಂಡಿಸಿದಂತಹ ಹಲವಾರು ಕಾಮಗಾರಿಗಳ ಲೆಕ್ಕದಲ್ಲಿ ಲೋಪವಿದೆ ಎಂದು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 15ನೇ ಹಣಕಾಸು ಯೋಜನೆ ಅಡಿಯಲ್ಲಿ ಕೈಗೊಂಡಂತಹ ಕುಡಿಯುವ ನೀರು, ವಿದ್ಯುತ್ ದೀಪ, ಮೋಟಾರ್ ದುರಸ್ತಿ, ಚರಂಡಿ ನಿರ್ಮಾಣ ಹಾಗೂ ಹಲವಾರು ಪರಿಕರಗಳ ಖರೀದಿಯಲ್ಲಿ ಲೋಪವಿದ್ದು ಸದರಿ ಅಂಶಗಳ ಲೆಕ್ಕವನ್ನು ಪರಿಶೀಲನೆ ನಡೆಸುವಂತೆ ಹಾಗೂ ತನಿಖೆ ನಡೆಸುವಂತೆ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೆಲ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಪಿಆರ್‌ಡಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ಕಾಮಗಾರಿಗಳ ಪೈಕಿ ಬಹುತೇಕ ಲೋಪವಿದ್ದು, ಸದರಿ ಇಲಾಖೆಯ ಎಂಜಿನಿಯರ್‌ ಹಾಗೂ ಗುತ್ತಿಗೆದಾರರು ಬರುವವರೆಗೂ ಯಾವುದೇ ಕಾರಣಕ್ಕೂ ಪಿಆರ್‌ಡಿ ಇಲಾಖೆಯ ಲೆಕ್ಕವನ್ನು ಸಭೆಯಲ್ಲಿ ಮಂಡಿಸದಂತೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಪಿ ಆರ್‌ಡಿ ಯೋಜನೆಯ ಕಾಮಗಾರಿಗಳ ಲೆಕ್ಕವನ್ನು ಮಂಡಿಸದಂತೆ ತಡೆಹಿಡಿಯಲಾಯಿತು. 2021-22ನೇ ಸಾಲಿನ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನಗಳ ಅಡಿಯಲ್ಲಿ ನಿರ್ಮಾಣವಾಗಿರುವ ಕಾಮಗಾರಿಗಳ ಲೆಕ್ಕವನ್ನು ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ತಡವಾಗಿ ನೀಡಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿ ನಡೆದು ಮೂರು ನಾಲ್ಕು ವರ್ಷಗಳು ಕಳೆದ ನಂತರ ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಕಾಮಗಾರಿಗಳ ವಿವರವನ್ನು ಮಂಡಿಸುತ್ತಿರುವುದು ಅಕ್ರಮ ಹಾಗೂ ಸರಿ ಇಲ್ಲವೆಂದರು. ಇನ್ನು ಬಾಣಾವರ ಸಮೀಪದ ಮಂಜುನಾಥನ ಕೊಪ್ಪಲು ಹಾಗೂ ಉಪ್ಪನಹಳ್ಳಿ ಗ್ರಾಮಗಳ ಕಾಮಗಾರಿಯನ್ನು ಬಾಣವರ ಗ್ರಾ. ಪಂ.ಯಲ್ಲಿ ಮಂಡಿಸುವುದನ್ನು ಆಕ್ಷೇಪಿಸಿದ ಸಾರ್ವಜನಿಕರು ಹಾಗೂ ಸದಸ್ಯರು, ಸದರಿ ಗ್ರಾಮಗಳುಪಂಚಾಯಿತಿ ವ್ಯಾಪ್ತಿಗೆ ಬರದೆ ಇರುವುದರಿಂದ ಆ ಗ್ರಾಮಗಳಲ್ಲಿ ನಡೆದ ಕಾಮಗಾರಿಗಳ ಲೆಕ್ಕವನ್ನು ಇಲ್ಲಿ ಮಂಡಿಸುವುದು ಸರಿಯಲ್ಲವೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಾಣವರ ಗ್ರಾಮದಲ್ಲಿ ಕೈಗೊಂಡಿರುವಂತಹ 15ನೇ ಹಣಕಾಸಿನ ಯೋಜನೆಯ ಕಾಮಗಾರಿಗಳ ಕೆಲವು ಕಾಮಗಾರಿಗಳನ್ನು ಸಭೆಯಲ್ಲಿ ಓದಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಒಟ್ಟಾರೆ 2023 -24 ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಸಭೆ ಹಲವಾರು ಸಾರ್ವಜನಿಕರ ಆರೋಪಕ್ಕೆ ಗುರಿಯಾದಂತಾಯಿತು ಹಾಗೂ ಹಲವಾರು ವಿಷಯಗಳನ್ನು ಪುನಃ ಪರಿಶೀಲಿಸಿ ಕೆಲವು ಕಾಮಗಾರಿಗಳಿಗೆ ಬಿಡುಗಡೆಯಾದ ಹಣವನ್ನು ವಾಪಸ್ ಪಡೆಯುವಂತೆ ಆಗ್ರಹಿಸಲಾಯಿತು. ಸಭೆಯಲ್ಲಿ ಗ್ರಾ. ಪಂ. ಅಧ್ಯಕ್ಷ ವೀಣಾ ವಿಶ್ವನಾಥ್, ಸಾಮಾಜಿಕ ಲೆಕ್ಕ ಪರಿಶೋಧನಾ ಇಲಾಖೆಯ ಶಿವಪ್ರಸಾದ್, ತಾಲೂಕು ಯೋಜನಾಧಿಕಾರಿ ವೇಣುಗೋಪಾಲ್, ಗ್ರಾ. ಪಂ. ಸದಸ್ಯರಾದ ಶ್ರೀಧರ್, ಬಿ ಎನ್ ಧರ್ಮಣ್ಣ, ಸೈಯದ್ ಆಸಿಫ್, ಸಂಜಯ್, ಸರಸ್ವತಿ, ಶ್ರೀನಿವಾಸ್, ಭಾಗ್ಯಮ್ಮ, ಆಶಾ ಹರೀಶ್, ಬಿಡಿ ಮಲ್ಲಿಕಾರ್ಜುನ್ ಹಾಗೂ ಗ್ರಾಮಸ್ಥರಾದ ಪ್ಯಾರೂ ಸಾಹೇಬ್ ಕೋಟಪ್ಪ, ಈಶ್ವರಪ್ಪ ರೈತ ಸಂಘದ ಅಧ್ಯಕ್ಷ ಬಿ ಎನ್ ಬೀರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.