ಸಾರಾಂಶ
ಬಸವಣ್ಣನವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಬಸವ ಭಕ್ತರಿಗೆ ನೋವುಂಟುಮಾಡಿದೆ. ಯತ್ನಾಳ್ ಬಸವ ತತ್ವ ವಿರೋಧಿಯಾಗಿದ್ದು, ಸಮಾಜದಲ್ಲಿ ನಕಲಿ ಹಿಂದೂ ನಾಯಕರಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರನ್ನು ಲಿಂಗಾಯತ ಸಮುದಾಯವು ದೂರ ಇಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಚಾರಕ್ಕಾಗಿ ಬಸವಣ್ಣನವರನ್ನು ನಿಂದಿಸಿರುವ ಶಾಸಕ ಬಸವರಾಜ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಮಳವಳ್ಳಿಯ ಕಲ್ಯಾಣ ಬಸವೇಶ್ವರ ಮಠದ ಶ್ರೀಓಂಕಾರ ಸ್ವಾಮೀಜಿ ಆಗ್ರಹಿಸಿದರು.ಬಸವಣ್ಣನವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಬಸವ ಭಕ್ತರಿಗೆ ನೋವುಂಟುಮಾಡಿದೆ. ಯತ್ನಾಳ್ ಬಸವ ತತ್ವ ವಿರೋಧಿಯಾಗಿದ್ದು, ಸಮಾಜದಲ್ಲಿ ನಕಲಿ ಹಿಂದೂ ನಾಯಕರಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರನ್ನು ಲಿಂಗಾಯತ ಸಮುದಾಯವು ದೂರ ಇಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜಕೀಯ ಬೆಳವಣಿಗೆ, ಅಧಿಕಾರಕ್ಕಾಗಿ ಬಸವಣ್ಣನವರನ್ನು ಬಳಸಿಕೊಂಡಿರುವ ಯತ್ನಾಳ್ ಅವರನ್ನು ಲಿಂಗಾಯತ ಸಮುದಾಯ ಕ್ಷಮಿಸುವುದಿಲ್ಲ. ಬಸವಣ್ಣನವರು ಹೊಳೆಗೆ ಹಾರಿಕೊಂಡರು ಎಂದು ಹೇಳಿಕೆಯನ್ನು ಯಾವ ಅರ್ಥದಲ್ಲಿ ನೀಡಿದರು. ಅದಕ್ಕೆ ಯತ್ನಾಳ್ ಕ್ಷಮೆಯಾಚಿಸಬೇಕು. ರಾಜಕೀಯ ಸ್ವಾರ್ಥ ಸಾಧನೆಗೆ ಬಸವಣ್ಣನವರ ಹೆಸರನ್ನು ಬಳಸಿಕೊಂಡಿದ್ದಲ್ಲದೇ, ಅವರ ವಿರುದ್ಧ ಲಘುವಾಗಿ ಮಾತನಾಡಿರುವುದರಿಂದ ಪಕ್ಷದಿಂದ ಉಚ್ಚಾಟಿಸುವಂತೆ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದರು.ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಮಾತನಾಡಿ, ರಾಜಕಾರಣಿಗಳು ಬಸವಣ್ಣನ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಬಸವಣ್ಣನವರ ತತ್ವಾದರ್ಶಗಳನ್ನು ತಮ್ಮ ಓಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡುತ್ತಿರುವುದು ದುರ್ದೈವದ ಸಂಗತಿ, ಬಿಜೆಪಿ ಪಕ್ಷ ಕೂಡಲೇ ಇವರನ್ನು ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಹಿಸದ ಬಿಜೆಪಿ ನಾಯಕರು ಈ ರೀತಿಯ ವರ್ತನೆಗೆ ಮುಂದಾಗಿದ್ದು, ಸರ್ಕಾರ ಕೂಡಲೇ ಇದರ ಸಂಬಂಧ ಸೂಕ್ತ ಕ್ರಮ ಕೈಗೊಂಡು. ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಮಹಾಸಭಾದ ಮದ್ದೂರು ಅಧ್ಯಕ್ಷ ಶಿವಲಿಂಗಪ್ಪ, ಶಿವರುದ್ರಸ್ವಾಮಿ, ಬೆಳ್ಳಪ್ಪ, ಆನಂದ್, ವೀರಭದ್ರಯ್ಯ, ಮಂಜುನಾಥ್ ಗೋಷ್ಠಿಯಲ್ಲಿದ್ದರು.