ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಎರಡು ವಾಹನಗಳು ಮುಖಮುಖಿ ಡಿಕ್ಕಿಯಾಗಿದ್ದು ಇಬ್ಬರು ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಕುಶಾಲನಗರ ಮಡಿಕೇರಿ ಹೆದ್ದಾರಿ ಆನೆಕಾಡು ಬಳಿ ನಡೆದಿದೆ. ಮಾರುತಿ ಓಮ್ನಿ ಕಾರು ಮತ್ತು ಬೊಲೆರೋ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಆದ ಹಿನ್ನೆಲೆಯಲ್ಲಿ ಮಾರುತಿ ವಾಹನದಲ್ಲಿದ್ದ ಬಸವನಹಳ್ಳಿ ಸಮೀಪ ಹೇರೂರು ರಸ್ತೆಯ ನಿವಾಸಿ ನಿವೃತ್ತ ಸೈನಿಕ ಅಪ್ಪಂಡೇರಂಡ ದೇವಯ್ಯ (48) ಮತ್ತು ಪುತ್ರಿ ನ್ಯಾನ್ಸಿ ದೇವಯ್ಯ (3) ಮೃತರು.ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೊಲೆರೋ ಜೀಪ್‌ನ ಚಾಲಕ ಸಮೀಪದ ಚೆಣಕಲ್ ಕಾವಲ್ ನಿವಾಸಿ ಅರುಣ, ಮತ್ತು ಮಹಿಳೆಯರಾದ ನೀಲಮ್ಮ ಜಯಲಕ್ಷ್ಮಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಗಾಯಾಳುಗಳನ್ನು ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಸಾಗಿಸಲಾಗಿದೆ.ಸ್ಥಳಕ್ಕೆ ಕುಶಾಲನಗರ ಸಂಚಾರಿ ಠಾಣೆಯ ಅಧಿಕಾರಿ ಚಂದ್ರಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು ಕುಶಾಲನಗರ ಸಂಚಾರಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗೆ ಜೈಲು ಶಿಕ್ಷೆ:ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದ ಪ್ರಕರಣದ ಆರೋಪಿಗೆ ಐಪಿಸಿ ಮತ್ತು ಪೋಕ್ಸೋ ಕಾಯ್ದೆ ಅಡಿ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. 2019ರ ಡಿ.10 ರಂದು ಬೆಳಿಗ್ಗೆ ಶಾಲೆಗೆಂದು ತೋಟದ ಒಳಗೆ ಕಾಲು ದಾರಿಯಲ್ಲಿ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಹಾಲಿನ ವ್ಯಾನ್ ನ ಚಾಲಕನಾದ ಆರೋಪಿ ಸೂರ್ಯನಾಯಕ ವಿರುದ್ಧ ನೊಂದ ಬಾಲಕಿಯು ಮಡಿಕೇರಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಮಡಿಕೇರಿಯ ಪೊಲೀಸ್ ನಿರೀಕ್ಷಕ ಪಿ. ಪಿ. ಸೋಮೇಗೌಡ ಇವರು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್. ಸಿ. ಶಾಮ್ ಪ್ರಸಾದ್ ಇವರು ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಐ ಪಿ ಸಿ ಮತ್ತು ಪೋಕ್ಸೋ ಕಾಯ್ದೆ ಅಡಿ 3 ವರ್ಷ ಸಜೆ ಮತ್ತು ರು. 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎಸ್.ರುದ್ರಪ್ರಸನ್ನ ವಾದ ಮಂಡಿಸಿದ್ದರು.