ಸಾರಾಂಶ
ದೆಹಲಿ ಮಾದರಿ ರೈತ ಹೋರಾಟವನ್ನು ದಕ್ಷಿಣ ಭಾರತದಲ್ಲಿ ಪ್ರಬಲಗೊಳಿಸಲು ಜೂ.24ರಂದು ಶಿವಮೊಗ್ಗ ನಗರದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಹೊನ್ನಾಳಿ : ದೆಹಲಿ ಮಾದರಿ ರೈತ ಹೋರಾಟವನ್ನು ದಕ್ಷಿಣ ಭಾರತದಲ್ಲಿ ಪ್ರಬಲಗೊಳಿಸಲು ಜೂ.24ರಂದು ಶಿವಮೊಗ್ಗ ನಗರದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ರೈತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಬೇಕು ಎಂದು ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ. ಕರುಬಸಪ್ಪಗೌಡ ಹೇಳಿದರು.
ಶುಕ್ರವಾರ ಹಿರೇಕಲ್ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ವತಿಯಿಂದ ಪಂಜಾಬ್, ಹರಿಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ನಡೆಯುತ್ತಿರುವ ನಿರಂತರ ಹೋರಾಟವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ, ಅವರ 32 ಎಂಪಿಗಳು ಹಾಗೂ 16 ರಾಜ್ಯಸಭಾ ಸದಸ್ಯರು ಮುಂದಿನ ಸಂಸತ್ ಅಧಿವೇಶನದಲ್ಲಿ ಮಾತನಾಡಿ, ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಚರ್ಚೆ ವಿಷಯಗಳೇನು?:
ಸಮಾವೇಶದಲ್ಲಿ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ರೈತರ ಕೃಷಿ ಸಾಲ ಮನ್ನಾ ಮಾಡುವುದು, ಬೆಳೆ ವಿಮೆ ನೀತಿ ಬದಲಾಯಿಸಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿಗೆ ತರುವುದು, ಬರಗಾಲ, ಅತಿವೃಷ್ಠಿಗಳಿಂದ ಹಾಗೂ ಪ್ರಕೃತಿ ವಿಕೋಪಕ್ಕೆ ಒಳಗಾದ ಬೆಳೆ ಹಾನಿ ನಷ್ಟ ಪರಿಹಾರದ ಎನ್‍ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುವ ಮಾರಾಟಗಾರರಿಗೆ ಜಾಮೀನು ರಹಿತ ಬಂಧನ ಮಾಡುವ ಕಠಿಣ ಕಾನೂನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಇದರಿಂದ ರೈತರಿಗೆ ಅನ್ಯಾಯ ಆಗುವುದು ತಪ್ಪುತ್ತದೆ ಎಂದು ಹೇಳಿದರು.
ಬಿತ್ತನೆಬೀಜ, ರಸಗೊಬ್ಬರ ವಿತರಿಸಿ:
ಮುಂಗಾರು ಸಂಪೂರ್ಣ ದುರ್ಬಲವಾಗಿದೆ. ಈ ಮಧ್ಯೆಯೇ ರೈತರು ಬಿತ್ತನೆ ಕಾರ್ಯ ಮಾಡಿದ್ದಾರೆ. ಈಗ ಮಳೆ ಹೋಗಿ ಮೊಳಕೆಯೊಡೆದ ಬೆಳೆಗೆ ನೀರಿಲ್ಲದೇ, ಬೆಳೆಗಳು ಒಣಗಲು ಪ್ರಾರಂಭಿಸಿವೆ. ಇದರ ನಷ್ಟ ಮತ್ತು ಮುಂದಿನ ದಿನಗಳಲ್ಲಿ ಮರುಬಿತ್ತನೆಗೆ ಸರ್ಕಾರ ಪೂರಕವಾಗಿ ಕೆಲಸ ಮಾಡಿ, ಉಚಿತ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕನಾಟಕ ರಾಜ್ಯ ಹಸಿರು ಸೇನೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಬಸವರಾಜ್ ಸಂಬೋಳ್, ಜಿಲ್ಲಾ ಮುಖಂಡರಾದ ಮುರಗೇಶಪ್ಪ, ಶ್ರೀನಿವಾಸ್, ರುದ್ರೇಶ್, ತಾಲೂಕು ಅಧ್ಯಕ್ಷ ಬಸಪ್ಪ, ಮುಖಂಡರುಗಳಾದ ಉಮೇಶ್, ಕರಿಬಸಪ್ಪ, ಬಸವರಾಜಪ್ಪ ಇತರರು ಉಪಸ್ಥಿತರಿದ್ದರು.
ಬೆಲೆ ಏರಿಕೆ ಆದೇಶ ವಾಪಸ್ ಪಡೆಯಿರಿ ಬಿತ್ತುವ ಕಾಲದಲ್ಲಿ ತೈಲ ಬೆಲೆಗಳನ್ನು ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿ ಇಲ್ಲ. ರೈತರು ಟ್ರಾಕ್ಟರ್, ಟ್ರ್ಯಾಲಿ, ದ್ವಿಚಕ್ರ ವಾಹನಗಳನ್ನು ಈ ಸಮಯದಲ್ಲಿ ಹೆಚ್ಚು ಬಳಸುತ್ತಾರೆ. ತಕ್ಷಣ ಏರಿಕೆ ಮಾಡಿರುವ ತೈಲ ಬೆಲೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಅಧ್ಯಕ್ಷರು ಆಗ್ರಹಿಸಿದರು.