27ರಂದು ಉಡುಪಿ- ದ.ಕ. ಜಿಲ್ಲಾ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ

| Published : Oct 24 2024, 12:42 AM IST / Updated: Oct 24 2024, 12:43 AM IST

27ರಂದು ಉಡುಪಿ- ದ.ಕ. ಜಿಲ್ಲಾ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಬೃಹತ್‌ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ಮಾರಾಟ ಮತ್ತು ಪ್ರದರ್ಶನವನ್ನು ಅ. 27ರಂದು ಕೊಡವೂರಿನ ಶ್ರೀ ಶಿರಡಿ ಸಾಯಿಬಾಬ ಮಂದಿರದಲ್ಲಿ ನಡೆಯಲಿದೆ. ಸಾಸ್‌ನ ಮಹಾಪೋಷಕರಾದ ಡಾ. ಜಿ. ಶಂಕರ್‌ ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸಾಂಪ್ರದಾಯಿಕ ಗೂಡು ದೀಪಗಳ ‘ಬೃಹತ್ ಸಾಂಪ್ರದಾಯಿಕ ಬೃಹತ್ ಗೂಡು ದೀಪ ಸ್ಪರ್ಧೆ, ಮಾರಾಟ ಮತ್ತು ಪ್ರದರ್ಶನ’ವನ್ನು ಅ.27ರಂದು ಕೊಡವೂರಿನ ಶ್ರೀ ಶಿರಡಿ ಸಾಯಿಬಾಬ ಮಂದಿರದಲ್ಲಿ ಆಯೋಜಿಸಲಾಗಿದೆ.

ಉಡುಪಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಸಾಸ್) ಮತ್ತು ಅದರ ಮಹಿಳಾ ಘಟಕಗಳ ವತಿಯಿಂದ, ಶ್ರೀ ಶಿರಡಿ ಸಾಯಿಬಾಬಾ ಮಂದಿರ ತೋಟದಮನೆ ಕೊಡವೂರು, ಎಪಿಎಂಸಿ ರಕ್ಷಣಾ ಸಮಿತಿಗಳ ಸಹಯೋಗದಲ್ಲಿ ದೀಪಾವಳಿ ಪ್ರಯುಕ್ತ ನಡೆಯಲಿದೆ.

ಈ ಬಗ್ಗೆ ಸಾಸ್‌ನ ಉಪಾಧ್ಯಕ್ಷ ವಿಜಯ ಕೊಡವೂರು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸ್ಪರ್ಧೆಯನ್ನು ಸಾಸ್‌ನ ಮಹಾಪೋಷಕರಾದ ನಾಡೋಜ ಡಾ.ಜಿ.ಶಂಕರ್ ಅವರು ಉದ್ಘಾಟಿಸಲಿದ್ದಾರೆ. 8 ಗಂಟೆಗೆ ಸ್ಪರ್ಧೆ ಆರಂಭವಾಗಲಿದ್ದು, 12 ಗಂಟೆಗೆ ಮುಗಿದು ಸ್ಥಳದಲ್ಲಿಯೇ ಬಹುಮಾನಗಳನ್ನು ವಿತರಿಸಲಾಗುತ್ತದೆ.

ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದ್ದು, 16 ವರ್ಷ ಮೇಲ್ಪಟ್ಟ ಸ್ಪರ್ಧೆಯ ಪ್ರಥಮ ವಿಜೇತರಿಗೆ 5,555 ರು., ದ್ವಿತೀಯ 4,444 ರು., ತೃತೀಯ 3,333 ರು. ಹಾಗೂ 5 ಮಂದಿಗೆ ತಲಾ 1,000 ರು. ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

10ನೇ ತರಗತಿ ಒಳಗಿನ ಜೂನಿಯರ್ ವಿಭಾಗದಲ್ಲಿ ಪ್ರಥಮ 4,444 ರು., ದ್ವಿತೀಯ 3,333 ರು., ತೃತೀಯ 2,222 ರು., 5 ಜನರಿಗೆ ತಲಾ 1,000 ರು. ಸಮಾಧಾನಕರ ಬಹುಮಾನವಿದೆ ಎಂದವರು ತಿಳಿಸಿದ್ದಾರೆ.

ಗೂಡುದೀಪಗಳನ್ನು ಸ್ಥಳದಲ್ಲಿಯೇ ತಯಾರಿಸಬೇಕು, ಭಾಗವಹಿಸುವ ತಂಡದಲ್ಲಿ ಇಬ್ಬರಿಗೆ ಅವಕಾಶವಿದ್ದು, ಗೂಡು ದೀಪ ಪೂರ್ಣಗೊಳಿಸಲು 4 ಗಂಟೆಯ ಸಮಯಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಸ್‌ನ ಅಧ್ಯಕ್ಷ ರಾಧಾಕೃಷ್ಣ ಮೆಂಡನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಹಾವಂಜೆ ಮತ್ತು ಸಾಸ್ ಮಹಿಳಾ ಘಟಕದ ಕೋಶಾಧಿಕಾರಿ ತಾರಾ ಸತೀಶ್ ಉಪಸ್ಥಿತರಿದ್ದರು.

ಸ್ಪರ್ಧೆಯ ಉದ್ದೇಶಗಳು: ಈ ಸ್ಪರ್ಧೆಯ ಮೂಲಕ ನಶಿಸುತ್ತಿರುವ ಸಾಂಪ್ರದಾಯಿಕ ಗೂಡುದೀಪ ಕಲೆಗೆ ಜೀವ ತುಂಬಿಸುವುದು, ಚೈನಾ ನಿರ್ಮಿತ ಗೂಡುದೀಪಗಳ ಹಾವಳಿಯನ್ನು ತಪ್ಪಿಸುವುದು, ಪ್ಲಾಸ್ಟಿಕ್ ಮತ್ತು ಥರ್ಮಕೋಲ್ ನಂತಹ ಪರಿಸರ ಹಾನಿಕಾರಕ ವಸ್ತುಗಳಿಂದ ರಚಿಸಿದ ಗೂಡುದೀಪಗಳ ಬಳಕೆ ನಿಲ್ಲಿಸುವುದಕ್ಕೆ ಪ್ರೋತ್ಸಾಹಿಸುವುದು, ಆಸಕ್ತರಿಗೆ ಸಾಂಪ್ರದಾಯಿಕ ಗೂಡುದೀಪಗಳ ರಚನೆಯನ್ನು ಕಲಿಸಿ ಮನೆಯಲ್ಲಿಯೇ ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸುವುದು ಮತ್ತು ದೀಪಾವಳಿಯನ್ನು ಆಚರಿಸುವವರಿಂದಲೇ ಗೂಡುದೀಪ ಮತ್ತು ದೀಪಾವಳಿಯ ವಸ್ತುಗಳನ್ನು ಖರೀದಿಸಿ, ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಉಳಿಸುವುದು.