ಸಾರಾಂಶ
ಮಾದಾರ ಗುರುಪೀಠದ ಪಕ್ಕದ 150 ಎಕರೆ ವಿಸ್ತೀರ್ಣದ ಜಾಗದಲ್ಲಿ ಆಯೋಜನೆ । ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿಕನ್ನಡಪ್ರಭ ವಾರ್ತೆ ಚಿತ್ರದುರ್ಗಅಹಿಂದ ಮಾದರಿಯಲ್ಲಿ ಜನವರಿ 28ರಂದು ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿ ಸಮಾವೇಶ ಆಯೋಜಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಮಾದಾರ ಗುರುಪೀಠದ ಪಕ್ಕದಲ್ಲಿರುವ 150 ಎಕರೆ ವಿಶಾಲವಾದ ಜಾಗದಲ್ಲಿ ಸಮಾವೇಶ ನಡೆಯಲಿದೆ.
ಇಲ್ಲಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ರಾಜ್ಯ ಸರ್ಕಾರ ಕಾಂತರಾಜ್ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಬೇಕು. ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ ,ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಬೇಕೆಂಬ ಪ್ರಮುಖ ಉದ್ದೇಶ ಸಮಾವೇಶದ್ದಾಗಿದೆ. ರಾಜ್ಯದ ಎಲ್ಲಾ ಶೋಷಿತ ಸಮುದಾಯಗಳ ಮುಖಂಡರನ್ನು ಆಹ್ವಾನಿಸಿದ್ದೇವೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಆಹ್ವಾನ ನೀಡಿದ್ದೇವೆ. ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದರು.ಭಾರತ ಹಲವು ವೈವಿದ್ಯತೆಯ ದೇಶ, ಸರ್ವಜನಾಂಗದ ಶಾಂತಿಯ ತೋಟ. ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗದೆ ಶೇ.97 ರಷ್ಟು ತಳ ಸಮುದಾಯಗಳು ಸಾವಿರಾರು ವರ್ಷಗಳಿಂದ ಸಂಕಷ್ಟವನ್ನು ಅನುಭವಿಸಿಕೊಂಡು ಬಂದಿವೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನದಿಂದಾಗಿ ಕಳೆದ 70 ವರ್ಷಗಳಿಂದ ವಿದ್ಯೆ, ಉದ್ಯೋಗ, ಅಧಿಕಾರ, ಅಂತಸ್ತು, ಸಮಾನತೆ ಪಡೆದು ದೇಶದ ಮೂಲ ನಿವಾಸಿಗಳು ಪ್ರಗತಿಯತ್ತ ಮುನ್ನಡೆಯುತ್ತಿದ್ದಾರೆ. ಇದನ್ನು ಸಹಿಸಲಾಗದ ಪುರೋಹಿತಶಾಹಿ ವರ್ಗ ಮುಸಲ್ಮಾನರೆಂಬ ಬೆದರು ಬೊಂಬೆಯ ಭಯ ಹುಟ್ಟಿಸಿ ತಮ್ಮ ಸ್ವಾರ್ಥಕ್ಕಾಗಿ ತಳ ಸಮುದಾಯದ ಯುವಕರುಗಳನ್ನು ಮರಳು ಮಾಡುತ್ತಿವೆ. ಅವರ ಮಾತಿಗೆ ಮರಳಾಗದೆ ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ, ಸ್ವಾಭಿಮಾನದ, ಸಂರಕ್ಷಣೆಗಾಗಿ ಐಕ್ಯತೆಯಿಂದ ಹೋರಾಡಬೇಕಿದೆ ಎಂದರು.
ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ ಸಮಾನತೆ ಸಾರಿದ ಅಗ್ರಗಣ್ಯ ರಾಜ್ಯ ಕರ್ನಾಟಕ. ಹಲವು ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿದ ಪರಿಣಾಮ ಮೀಸಲಾತಿ ಜಾರಿಯಾಗಿದೆ. ಇಂದಿರಾ ಸಹಾನಿ ಕೇಸ್‌ನಲ್ಲಿ ಸುಪ್ರಿಂಕೋರ್ಟ್ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಿಕೊಳ್ಳುವಂತೆ ರಾಜ್ಯಗಳಿಗೆ ನಿರ್ದೇಶಿಸಿದೆ. ಆ ಪ್ರಕಾರ ಎಲ್ಲಾ ರಾಜ್ಯಗಳು ಆಯೋಗ ರಚಿಸಿ ಎಲ್ಲಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವಿಕೆಯನ್ನು ಗುರುತಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಅಧ್ಯಯನಗಳನ್ನು ಪರಿಶೀಲಿಸಿ ಎಲ್ಲಾ ಜಾತಿಯವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂಬುದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಒತ್ತಾಯವಾಗಿದೆ ಎಂದರು.ಕಾಂತರಾಜು ವರದಿಯನ್ನು ರಾಜ್ಯ ಸರ್ಕಾರವು ಯಥಾವತ್ತಾಗಿ ಅಂಗೀಕರಿಸಿ ಜಾರಿಗೊಳಿಸಬೇಕು, ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು, ಇಡಬ್ಲುಎಸ್ ಸೇ.10 ರ ಮೀಸಲಾತಿ ರದ್ದುಪಡಿಸಬೇಕು. ಮಹಿಳಾ ರಾಜಕೀಯ ಮೀಸಲಾತಿ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕು. ರಾಜಕೀಯ ಕ್ಷೇತ್ರದಲ್ಲೂ ಒಳ ಮೀಸಲಾತಿ ಕಲ್ಪಿಸಬೇಕು. ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸಬೇಕು. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂಬ ಪ್ರಮುಖ ಹಕ್ಕೊತ್ತಾಯಗಳು ಸಮಾವೇಶದಲ್ಲಿ ಮಂಡನೆಯಾಗಲಿವೆ ಎಂದು ರಾಮಚಂದ್ರಪ್ಪ ಹೇಳಿದರು.
ವೆಂಕಟರಾಮಯ್ಯ, ಸುಬ್ರಮಣ್ಯ, ವೆಂಕಟಸುಬ್ಬರಾವ್, ಬಿ.ಟಿ ಜಗದೀಶ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಎಚ್.ಸಿ.ನಿರಂಜನ ಮೂರ್ತಿ, ಸಿ.ಟಿ.ಕೃಷ್ಣಮೂರ್ತಿ, ಶ್ರೀರಾಮ್, ಜಿಪಂ ಮಾಜಿ ಅಧ್ಯಕ್ಷ ಶಶಿಕಲಾ ಸುರೇಶ್ ಬಾಬು, ಖಾಸಿಂ ಆಲಿ, ರಾಮಜ್ಜ, ಎನ್.ಡಿ.ಕುಮಾರ್, ಮೂರ್ತಿ, ಪ್ರತಾಪ್ ಜೋಗಿ, ಲಕ್ಷ್ಮಿಕಾಂತ, ಷಫಿವುಲ್ಲಾ, ರಾಜಣ್ಣ, ಮಂಜುನಾಥ್, ದುರುಗೇಶಪ್ಪ, ಪ್ರಕಾಶಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.