13ರಂದು ಪ್ರೊ. ಎಂಡಿಎನ್‌ ನೆನಪಿನ ಕಾರ್ಯಕ್ರಮ

| Published : Feb 07 2024, 01:48 AM IST

13ರಂದು ಪ್ರೊ. ಎಂಡಿಎನ್‌ ನೆನಪಿನ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಸಂಘ ಮತ್ತು ಹಸಿರು ಸೇನೆ (ಸಾಮೂಹಿಕ ನಾಯಕತ್ವ) ವತಿಯಿಂದ ರೈತ ಹೋರಾಟಗಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ೮೮ನೇ ಜನ್ಮ ದಿನಾಚರಣೆ ಅಂಗವಾಗಿ ನಮ್ಮ ಎಂಡಿಎನ್ ಕಾರ್ಯಕ್ರಮವನ್ನು ಫೆ.೧೩ ರಂದು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತ ಸಂಘ ಮತ್ತು ಹಸಿರು ಸೇನೆ (ಸಾಮೂಹಿಕ ನಾಯಕತ್ವ) ವತಿಯಿಂದ ರೈತ ಹೋರಾಟಗಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ೮೮ನೇ ಜನ್ಮ ದಿನಾಚರಣೆ ಅಂಗವಾಗಿ ನಮ್ಮ ಎಂಡಿಎನ್ ಕಾರ್ಯಕ್ರಮವನ್ನು ಫೆ.೧೩ ರಂದು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ ೧೦ ಗಂಟೆಗೆ ರಾಷ್ಟ್ರೀಯ ರೈತ ನೇತಾರ ರಾಕೇಶ್ ಟಿಕಾಯತ್ ಉದ್ಘಾಟಿಸಲಿದ್ದಾರೆ ಎಂದು ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರೊ.ಎಂಡಿಎನ್ ನಾ ಕಂಡಂತೆ ವಿಷಯವಾಗಿ ಬರಹಗಾರ ನಟರಾಜ್ ಹುಳಿಯಾರ್ ಸಂವಾದ ನಡೆಸಿಕೊಡಲಿದ್ದಾರೆ. ಮಖ್ಯಮಂತ್ರಿ ಸಿದ್ದರಾಮಯ್ಯ, ಹೋರಾಟಗಾರ್ತಿ ಮೇಧಾ ಪಾಟ್ಕರ್, ಜನಪದ ವಿದ್ವಾಂಸ ಪ್ರೊ.ಹಿ.ಸಿ.ರಾಮಚಂದ್ರಗೌಡ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಅಗ್ರಹಾರ ಕೃಷ್ಣಮೂರ್ತಿ, ಭಾರತೀಯ ಕಿಸಾನ್ ಯೂನಿಯನ್‌ನ ಯುದ್ದವೀರಸಿಂಗ್, ಕೆನಡಾದ ರೈತ ಹೋರಾಟಗಾರ ಪ್ರೊ.ನೆಟ್ಟಿ ವೀಬ್, ಪಚ್ಚೆ ನಂಜುಂಡಸ್ವಾಮಿ, ಹಿಂದೂ ಪತ್ರಿಕೆ ಸಂಪಾದಕ ಬಿ.ಎಸ್.ಸತೀಶ್, ಸ್ಪೆನ್‌ನ ರೈತ ಹೋರಾಟಗಾರ ಪಾಲ್ ನಿಕೋಲ್ಸನ್, ತಮಿಳುನಾಡು ರೈತ ಸಂಘದ ನಲ್ಲಗೌಂಡರ್, ಹಾಂಡುರಾಸ್ ದೇಶದ ಸಚಿವ ರಾಫೆಲ್ ಅಲೆಗ್ರಿಯಾ, ರೈತ ಮುಖಂಡ ಕೆ.ಟಿ.ಗಂಗಾಧರ್ ಪಾಲ್ಗೊಳ್ಳಲಿದ್ದಾರೆ ಎಂದರು. ಮಧ್ಯಾಹ್ನ ೨.೩೦ ಗಂಟೆಗೆ ಪ್ರೊ.ಎಂ.ಡಿ.ಎನ್.ಸ್ಮಾರಕ ಉಪನ್ಯಾಸದಡಿ ‘ಭಾರತದ ರೈತರಿಗೆ ಆಗುತ್ತಿರುವ ಮೋಸಗಳು. ಅದರ ಹಿಂದಿರುವ ಬಂಡವಾಳಶಕ್ತಿಗಳ ಕುತಂತ್ರಗಳು, ಸ್ವಮರ್ಯಾದೆಯ ಕೃಷಿಯೆಡೆಗೆ ನಮ್ಮ ದಾರಿ’ ಎಂಬ ವಿಷಯವಾಗಿ ಕೃಷಿ ತಜ್ಞ ಡಾ.ದೇವೆಂದ್ರ ಶರ್ಮಾ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ದೇಸಿ ಬೀಜ ಪ್ರದರ್ಶನ, ಪುಸ್ತಕ ಪ್ರದರ್ಶನ, ನಮ್ದು ರೈತ ಮಾರುಕಟ್ಟೆ ಉದ್ಘಾಟನೆ ಆಗಲಿದೆ. ಸಂಜೆ ೬.೩೦ ಗಂಟೆಗೆ ಡೈರೆಕ್ಟ್ ಆ್ಯಕ್ಷನ್ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ನಮ್ಮ ಜಿಲ್ಲೆಯಿಂದ ೨೫೦ ರೈತ ಮುಖಂಡರು, ಅವರ ಅಭಿಮಾನಿಗಳು ತೆರಳಿದ್ದಾರೆ. ರೈತ ಸಂಘದ ಸಾಮೂಹಿಕ ನಾಯಕತ್ವದಡಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಮೂಲ ಆಶಯವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಗಟ್ಟಿಗೊಳಿಸಲಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ಸಂಘದ ಮುಖಂಡರಾದ ಬಂದಿಗೌಡನಹಳ್ಳಿ ನಟರಾಜು, ವೀರನಪುರ ನಾಗಪ್ಪ, ಅಗತಗೌಡನಹಳ್ಳಿ ಜಗದೀಶ್, ವಸಂತ್, ಮಹೇಶ್, ಮಂಜುಕಿರಣ್ ಹಾಜರಿದ್ದರು.