ಕುಟ್ಟ - ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಆ. 27 ರವರೆಗೆ ವಾಹನ ಸಂಚಾರ ನಿಷೇಧ

| Published : Jul 30 2024, 12:35 AM IST

ಸಾರಾಂಶ

ಕುಸಿತವಾಗಿರುವ ಭಾಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ತೀವ್ರ ಮಳೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕುಟ್ಟ - ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಆ. 27 ರವರೆಗೆ ವಾಹನ ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಮಾಡಿದ್ದಾರೆ.

ಶ್ರೀಮಂಗಲ - ಕುಟ್ಟ ನಡುವಿನ ಕಾಯಿಮನೆ, ಮಂಚಳ್ಳಿ ಗ್ರಾಮದ ರಸ್ತೆಯಲ್ಲಿ ಭೂಕುಸಿತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವರ್ಗದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಪ್ರಸ್ತುತ ಭಾರೀ ಮಳೆಯಿಂದ ಕುಟ್ಟ ರಾಜ್ಯ ಹೆದ್ದಾರಿಯ ಸಂ. 89ರ ಕಿ.ಮೀ. 80.40ರಲ್ಲಿನ (ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಕುಸಿತ ಉಂಟಾಗಿರುತ್ತದೆ.

ಕುಸಿತವಾಗಿರುವ ಭಾಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲು ಡಿಸಿ ಆದೇಶ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ನೀಡಿರುವ ವರದಿಯಂತೆ ಜಿಲ್ಲೆಯಲ್ಲಿ ಮುಂದಿನ ಕೆಲವು ದಿನಗಳ ಕಾಲ ಅತಿ ಹೆಚ್ಚಿನ ಮಳೆಯಾಗುವ ಎಚ್ಚರಿಕೆ ಇರುತ್ತದೆ.

ಹವಾಮಾನ ಇಲಾಖೆಯ ವರದಿಯಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ, ಮಡಿಕೇರಿ ಕುಟ್ಟ ರಾಜ್ಯ ಹೆದ್ದಾರಿಯ ಸಂ. 89ರ ಕಿ.ಮೀ. 80.40ರಲ್ಲಿನ (ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ.

ಬದಲೀ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವುದು ಸೂಕ್ತವೆಂದು ಕಂಡುಬಂದ ಕಾರಣ ಈ ಮಾರ್ಗದಲ್ಲಿ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಬದಲಿ ರಸ್ತೆ : ಸಾರ್ವಜನಿಕರು ಈ ರಸ್ತೆಯ ಬದಲಾಗಿ ಕುಟ್ಟ - ಕೇಂಬುಕೊಲ್ಲಿ-ಕಾನೂರು ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ ಕುಟ್ಟ - ಪೊನ್ನಂಪೇಟೆ ನಡುವೆ ಸಂಚರಿಸಬಹುದಾಗಿದೆ. ( ಅಂತರ 30.00 ಕಿ.ಮೀ)

ಇತರೆ ಲಿಂಕ್ ರಸ್ತೆಗಳು

1. ಶ್ರೀಮಂಗಲ - ನಾಲ್ವೇರಿ ಜಿಲ್ಲಾ ಮುಖ್ಯ ರಸ್ತೆಯ ಮೂಲಕ (6.00 ಕಿ.ಮೀ)

2. ಕಾಕೂರು - ಹೇರ್ಮಾಡು-ಬೊಳ್ಳಾರಿಗೇಟ್ ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ (6.90 ಕಿ.ಮೀ).