ಸಾರಾಂಶ
ಕನ್ನಡಪ್ರಭವಾರ್ತೆ ಚಾಮರಾಜನಗರ
ಗಡಿ ಜಿಲ್ಲೆಯಲ್ಲಿ ಗಜಗಣತಿ ಎರಡನೇ ದಿನವೂ ಮುಂದುವರೆದಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿ ಧಾಮ, ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಗಜ ಗಣತಿ ನಡೆದಿದೆ.ಮೊದಲ ದಿನ 15ಕಿಮೀ ವ್ಯಾಪ್ತಿಯಲ್ಲಿ ಆನೆಗಳ ಗುಂಪು, ಒಂಟಿ ಆನೆಗಳನ್ನು ನೇರವಾಗಿ ಕಂಡು ಗಣತಿ ನಡೆದಿದ್ದು ಎರಡನೇ ದಿನವಾದ ಶುಕ್ರವಾರ ಲದ್ದಿ ಮೂಲಕ ಆನೆ ಲೆಕ್ಕಾಚಾರ ಮಾಡಲಾಗಿದೆ. ಪ್ರತಿ ಬೀಟ್‌ನ ಎರಡು ಕಿಮೀಗಳ ವ್ಯಾಪ್ತಿಯಲ್ಲಿ ಆನೆ ಹಾಕಿರುವ ಲದ್ದಿ ಪರಿಶೀಲಿಸಿ ಆನೆಯ ಗಾತ್ರ, ಮರಿಯಾನೆಯಾ, ಗುಂಪಿನಲ್ಲಿರುವ ಆನೆಗಳಾ ಎಂಬುದರ ಅಂದಾಜನ್ನು ಮಾಡಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್ ಗಳು, ಕಾವೇರಿ ವನ್ಯಜೀವಿಧಾಮದ 43 ಬೀಟ್ ಗಳು, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 170 ಮಂದಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು ಶನಿವಾರ ಅಂತ್ಯವಾಗಲಿದೆ.ಬಂಡೀಪುರದಲ್ಲಿ ಗಣತಿ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಗಣತಿಯ ೨ ನೇ ದಿನ ಟ್ರಾಂಜಾಕ್ಟ್ ಲೈನ್‌ನಲ್ಲಿ ಬಿದ್ದಿರುವ ಆನೆಗಳ ಲದ್ದಿಯ ಬಗ್ಗೆ ಗಣತಿದಾರರು ಬೆಳಗ್ಗೆಯಿಂದ ಸಂಜೆ ತನಕ ಸರ್ವೆ ನಡೆಸಿದರು. ಮೇ ೨೩ ರಂದು ಆರಂಭವಾದ ಆನೆ ಗಣತಿಯಲ್ಲಿ ಕಾಡಿನಲ್ಲಿ ನೇರವಾಗಿ ಸಿಕ್ಕಿ ಆನೆಗಳ ಗಣತಿ ಮಾಡಿದ್ದರು. ೨ ನೇ ದಿನ ಟ್ರಾಂಜಾಕ್ಟ್ ಲೈನ್ ಸುತ್ತ ಮುತ್ತ ಬಿದ್ದಿರುವ ಆನೆ ಲದ್ದಿಯ ಬಗ್ಗೆ ಗಣತಿದಾರರು ಮಾಹಿತಿ ಕಲೆ ಹಾಕಿ ಇಲಾಖೆ ನೀಡಿರುವ ಫಾರ್ಮೆಟ್‌ನಲ್ಲಿ ನಮೂದಿಸಿದರು.
೧೩ ವಲಯಗಳ ಒಟ್ಟು ೧೧೩ ಗಸ್ತುಗಳಲ್ಲಿ ೩೫೦ ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಗಣತಿಯಲ್ಲಿ ತೊಡಗಿದ್ದರು ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಪ್ರಭಾಕರನ್ ಎಸ್ ತಿಳಿಸಿದ್ದಾರೆ.ಡಿಸಿಎಫ್ ವಿಸಿಟ್:
ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಪ್ರಭಾಕರನ್ ಎಸ್,ಬಂಡೀಪುರ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ನವೀನ್, ಗುಂಡ್ಲುಪೇಟೆ ಹಾಗೂ ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರ ಹಾಗೂ ವಲಯ ಅರಣ್ಯಧಾರಿಗಳಾದ ಬಿ.ಎಂ.ಮಲ್ಲೇಶ್, ಕೆ.ಪಿ. ಸತೀಶ್ ಕುಮಾರ್,ಎನ್.ಪಿ. ನವೀನ್ ಕುಮಾರ್, ಮಂಜುನಾಥ್, ಪುನೀತ್ ಕುಮಾರ್, ದೀಪಾ ಆನೆ ಗಣತಿಯ ಸಮಯದಲ್ಲಿ ಹಾಜರಿದ್ದು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.ಹನೂರಿನಲ್ಲಿ ಗಣತಿ: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವಲಯ ಹಾಗೂ ಕಾವೇರಿ ವನ್ಯಜೀವಿ ವಿಭಾಗ ವಲಯಗಳಲ್ಲಿ ಎರಡನೇ ದಿನವೂ ಸಹ ಗಜ ಗಣತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ನಡೆಸಿದರು. ಅರಣ್ಯ ಇಲಾಖೆಯ ಪ್ರತಿಗಸ್ತಿನ ಬೀಟ್‌ನ ಎರಡು ಕಿಮೀ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ಆನೆ ಲದ್ದಿ ಹಾಕಿರುವ ಬಗ್ಗೆ ಪರಿಶೀಲನೆ ನಡೆಸಿ ಆನೆಗಳ ಗಾತ್ರ ಮತ್ತು ಮರಿಯಾನೆ, ಗುಂಪಿನಲ್ಲಿರುವ ಆನೆಗಳ ಬಗ್ಗೆ ಪರಿಶೀಲಿಸಿದರು.