ಎರಡನೇ ದಿನವೂ ನೇಹಾ ನಿವಾಸಕ್ಕೆ ಗಣ್ಯರ ಭೇಟಿ, ಸಾಂತ್ವನ

| Published : Apr 22 2024, 02:03 AM IST

ಸಾರಾಂಶ

ಮೃತಳ ನಿವಾಸಕ್ಕೆ ಭಾನುವಾರವೂ ಹಲವು ಗಣ್ಯರು ಭೇಟಿ ಮಾಡಿ ಸಾಂತ್ವನ ಹೇಳಿ, ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಈಚೆಗೆ ಬಿವಿಬಿ ಕ್ಯಾಂಪಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದ ಹಿನ್ನೆಲೆಯಲ್ಲಿ ಬಿಡನಾಳದಲ್ಲಿರುವ ಮೃತಳ ನಿವಾಸಕ್ಕೆ ಭಾನುವಾರವೂ ಹಲವು ಗಣ್ಯರು ಭೇಟಿ ಮಾಡಿ ಸಾಂತ್ವನ ಹೇಳಿ, ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು.

ಬೆಳಗ್ಗೆ ಅಂಜುಮನ್‌ ಇಸ್ಲಾಂ ಸಂಸ್ಥೆಯ ನಿಯೋಗ ಭೇಟಿ ನೀಡಿ ಕುಟುಂಬದವರೊಂದಿಗೆ ಚರ್ಚಿಸಿ, ಇಡೀ ಮುಸ್ಲಿಂ ಸಮಾಜವೇ ನಿಮ್ಮೊಂದಿಗಿದ್ದು, ಆರೋಪಿ ಪರ ಯಾವ ಮುಸ್ಲಿಂ ವಕೀಲರು ವಕಾಲತ್ತು ವಹಿಸದಂತೆ ಮನವಿ ಮಾಡಿರುವುದಾಗಿ ತಿಳಿಸಿದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ನೇಹಾ ನಿವಾಸಕ್ಕೆ ಭೇಟಿ ನೀಡಿ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದರು.

ನೇಹಾ ನಿವಾಸಕ್ಕೆ ಆಗಮಿಸಿದ ಡಾ. ವಿಜಯ ಸಂಕೇಶ್ವರ ಅವರನ್ನು ನಿರಂಜನ ಹಿರೇಮಠ ತಬ್ಬಿಕೊಂಡು ಕಣ್ಣೀರು ಹಾಕಿದರು. ಆನಂತರ ಸಮಾಧಾನಪಡಿಸಿ ಮಾತನಾಡಿದ ಸಂಕೇಶ್ವರ, ಇಂತಹ ದುಷ್ಕೃತ್ಯ ನಡೆಯಬಾರದಿತ್ತು. ಸರ್ಕಾರ, ಪೊಲೀಸ್‌ ಇಲಾಖೆ ಸಮರ್ಪಕ ತನಿಖೆ ಕೈಗೊಂಡು ಆರೋಪಿಗೆ ಆದಷ್ಟು ಬೇಗನೇ ಗಲ್ಲುಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದರು.

ಶಾಸಕ ಶ್ರೀನಿವಾಸ ಮಾನೆ ಆಗಮಿಸಿ ಕುಟುಂಬದವರೊಂದಿಗೆ ಚರ್ಚಿಸಿ ಸಾಂತ್ವನ ಹೇಳಿದರು. ಸರ್ಕಾರ ನಿಮ್ಮ ಪರವಾಗಿದ್ದು, ಇಂತಹ ಸಂದರ್ಭದಲ್ಲಿ ಎಲ್ಲರ ಜವಾಬ್ದಾರಿ ಇರುತ್ತದೆ. ಅಂತರಾಳದಲ್ಲಿ ಮಾನವೀಯತೆ ಇಟ್ಟುಕೊಂಡು, ಸಂತ್ರಸ್ತ ಕುಟುಂಬಕ್ಕೆ ಶಕ್ತಿ ಕೊಟ್ಟು, ಅವರ ಜತೆಗೆ ಇರಬೇಕು. ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆಯನ್ನು ಈ ಸಂದರ್ಭದಲ್ಲಿ ಧೈರ್ಯದಿಂದ ಹೇಳಬೇಕಾಗುತ್ತದೆ. ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂದರು.

ಚಿತ್ರನಟ ಪ್ರಥಮ್‌ ನೇಹಾ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇ‍ಳಿದರು. ಇಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಕ್ತ ಪ್ರಹ್ಲಾದ ಆಗಬಾರದು, ಬದಲಿಗೆ ಉಗ್ರ ನರಸಿಂಹ ಆಗಬೇಕು. ಕೊಲೆ ಮಾಡುವ ಉದ್ದೇಶದಿಂದಲೇ ಫಯಾಜ್ ಕಾಲೇಜಿಗೆ ಬಂದಿದ್ದಾನೆ. ಆರೋಪಿ ತಂದೆ-ತಾಯಿಗೆ ಸಾಮಾನ್ಯಜ್ಞಾನ ಇದ್ದರೆ ಮದುವೆ ಮಾಡಬೇಕಿತ್ತು. ಇಂತಹವರು ಮಕ್ಕಳಿಗೆ ಏನು ಶಿಕ್ಷಣ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನಿಖಾ ತಂಡ ಭೇಟಿ

ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣದಲ್ಲಿ ಅವರ ತಂದೆ- ತಾಯಿ ಕೆಲವರ ವಿರುದ್ಧ ಆಪಾದನೆ ಮಾಡಿದ ಹಿನ್ನೆಲೆಯಲ್ಲಿ ಎಸಿಪಿ ಶಿವಪ್ರಕಾಶ ನಾಯ್ಕ್ ನೇತೃತ್ವದ ತನಿಖಾ ತಂಡ ಭಾನುವಾರ ಅವರ ನಿವಾಸಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆ ಹಾಕಿತು.

ನೇಹಾ ತಂದೆ ನಿರಂಜನ್ ಹಿರೇಮಠ ಜತೆ ಸುಮಾರು ಒಂದು ಗಂಟೆ ಕಾಲ ಪ್ರತ್ಯೇಕವಾಗಿ ಚರ್ಚಿಸಿ ತನಿಖೆಗೆ ಪೂರಕವಾದ ಮಾಹಿತಿ ಪಡೆದರು. ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಮಗಳು ಹಾಗೂ ತಮ್ಮ ಮನೆತನದ ಗೌರವಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಆದ್ದರಿಂದ ಅಂತಹ ಖಾತೆಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಬ್ಲಾಕ್ ಮಾಡಬೇಕು. ಅಲ್ಲದೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಭೇಟಿ ನೀಡಿ ನೇಹಾ ತಂದೆಯಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತನಿಖಾ ತಂಡದ ಮತ್ತು ವಿದ್ಯಾನಗರ ಠಾಣೆ ಪಿಐ ಡಿ‌.ಕೆ. ಪಾಟೀಲ ಇದ್ದರು.

ನಿರಂಜನ್‌ಗೆ ಡಿಸಿಎಂ ಕರೆ

ನೇಹಾ ಹಿರೇಮಠ ತಂದೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾನುವಾರ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು.

ಈ ದುರಂತದಿಂದ ನಮಗೂ ಆಘಾತವಾಗಿದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಗಿರುವ ದುಃಖದಲ್ಲಿ ನಾವೂ ಭಾಗಿ. ಸರ್ಕಾರ ನಿಮ್ಮ ಜತೆಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ. ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪೂರ್ವ ನಿಗದಿತ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರತನಾಗಿದ್ದ ಕಾರಣ ಹುಬ್ಬಳ್ಳಿಗೆ ಖುದ್ದು ಬರಲು ಆಗಲಿಲ್ಲ. ಚುನಾವಣೆ ಮುಗಿದ ನಂತರ ಖಂಡಿತವಾಗಿಯೂ ಬರುತ್ತೇನೆ. ಮಗಳ ಅಗಲಿಕೆಯಿಂದ ನಿಮಗೆ ಆಗಿರುವ ನೋವು ಎಂತಹದು ಎಂಬುದು ನನಗೆ ಅರ್ಥವಾಗುತ್ತದೆ. ನೋವು ಭರಿಸುವ ಶಕ್ತಿಯನ್ನು ನಿಮಗೆ, ನಿಮ್ಮ ಕುಟುಂಬ ಸದಸ್ಯರಿಗೆ ಆ ಭಗವಂತ ನೀಡಲಿ ಎಂದರು.