ಸಾರಾಂಶ
ರಾಜ್ಯದಲ್ಲಿ ಮತ್ತೆ ಕೋವಿಡ್ ಹೆಚ್ಚುತ್ತಿದ್ದು, ಗುರುವಾರ ರಾಜ್ಯದಲ್ಲಿ 298 ಹೊಸ ಕೇಸ್ ದಾಖಲಿಸಿದೆ. ಸೋಂಕಿಗೆ ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು, ಗುರುವಾರ 298 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ನಾಲ್ಕು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ತನ್ಮೂಲಕ ರಾಜ್ಯದಲ್ಲಿ ಪ್ರಸಕ್ತ ಅಲೆಯಲ್ಲಿ ದಿನದ ಹೆಚ್ಚು ಸೋಂಕು ಹಾಗೂ ದಿನದ ಹೆಚ್ಚು ಸಾವು ಪ್ರಕರಣ ಗುರುವಾರ ವರದಿಯಾಗಿದೆ.
ಜನವರಿ1ರಂದು 296 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಅಲೆಯ ದಾಖಲೆ. ಇದೀಗ ಗುರುವಾರ 298 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಬರೋಬ್ಬರಿ ನಾಲ್ಕು ಮಂದಿ ಸಾವನ್ನಪ್ಪುವ ಮೂಲಕ ಪ್ರಸಕ್ತ ಅಲೆಯ ಸಾವು 19ಕ್ಕೆ ಏರಿಕೆಯಾಗಿದೆ.
ನಾಲ್ಕು ಮಂದಿ ಸಾವು: ಮೈಸೂರಿನ 60 ವರ್ಷದ ಮಹಿಳೆ ಡಿ.28ರಂದು ಜ್ವರ ಹಾಗೂ ಕೆಮ್ಮು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಜ.3ರಂದು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 82 ವರ್ಷದ ವ್ಯಕ್ತಿ ಐಎಲ್‌ಐ, ಜ್ವರ, ಕೆಮ್ಮು ಸಮಸ್ಯೆಯಿಂದ ಡಿ.28ರಂದು ದಾಖಲಾಗಿದ್ದು, ಡಿ.30ರಂದು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಬೆಂಗಳೂರು ನಿವಾಸಿ 64 ವರ್ಷದ ವ್ಯಕ್ತಿ ಸಾರಿ ಸಮಸ್ಯೆಯಿಂದ ಡಿ.29ರಂದು ದಾಖಲಾಗಿ ಜ.1ರಂದು ಸಾವನ್ನಪ್ಪಿದ್ದು, ಧಾರವಾಡದಲ್ಲಿ 63 ವರ್ಷದ ವ್ಯಕ್ತಿ ಐಎಲ್‌ಐ ಲಕ್ಷಣಗಳೊಂದಿಗೆ ಡಿ.30ರಂದು ದಾಖಲಾಗಿ ಜ.2ರಂದು ಸಾವನ್ನಪ್ಪಿದ್ದಾರೆ.
298 ಮಂದಿಗೆ ಸೋಂಕು: ಗುರುವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 7,791 ಮಂದಿಗೆ ಸೋಂಕು ಪರೀಕ್ಷೆ ನಡೆಸಿದ್ದು, ಶೇ.3.82 ಪಾಸಿಟಿವಿಟಿ ದರದಂತೆ 298 ಸೋಂಕು ಹಾಗೂ ಶೇ.1.34ರಷ್ಟು ಸಾವಿನ ದರದಂತೆ ನಾಲ್ಕು ಸಾವು ದೃಢಪಟ್ಟಿದೆ.
1,240 ಸೋಂಕಿನಲ್ಲಿ 1,168 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 72 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 9 ಮಂದಿ ಐಸಿಯು, 9 ಮಂದಿ ಆಕ್ಸಿಜನ್ ಬೆಡ್, 3 ಮಂದಿ ವೆಂಟಿಲೇಟರ್ ಬೆಡ್‌ನಲ್ಲಿದ್ದಾರೆ.
ಸೋಂಕಿನ ಪೈಕಿ ಬೆಂಗಳೂರು ನಗರ 172, ಹಾಸನ 19, ಮೈಸೂರು 18, ದಕ್ಷಿಣ ಕನ್ನಡ, ಮಂಡ್ಯ ತಲಾ 11, ಚಾಮರಾಜನಗರ 8, ಬಳ್ಳಾರಿ 6, ವಿಜಯನಗರ, ತುಮಕೂರು, ಚಿಕ್ಕಮಗಳೂರು ತಲಾ 5, ಬಾಗಲಕೋಟೆ, ಉತ್ತರ ಕನ್ನಡ ತಲಾ 4, ಶಿವಮೊಗ್ಗ, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ ತಲಾ 3, ಬೆಳಗಾವಿ, ಕೊಡಗು, ರಾಮನಗರ ತಲಾ 2, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಗದಗ, ಕೋಲಾರ, ರಾಯಚೂರು ತಲಾ ಒಂದು ಪ್ರಕರಣ ವರದಿಯಾಗಿದೆ.
ದೀರ್ಘಕಾಲೀನ ರೋಗ ಬಗ್ಗೆ ನಿಗಾ ಇಡಲು ಸೂಚನೆ: ರಾಜ್ಯದಲ್ಲಿ ದೀರ್ಘಕಾಲೀನ ಅನಾರೋಗ್ಯ ಉಳ್ಳ ಕೊರೋನಾ ಸೋಂಕಿತರ ಸಾವು ಹೆಚ್ಚಾಗುತ್ತಿದೆ. ಹೀಗಾಗಿ ಕೊರೋನಾ ಸೋಂಕಿತರಿಗೆ ಕೇವಲ ಸೋಂಕಿಗೆ ಮಾತ್ರವಲ್ಲದೆ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗೂ ಹೆಚ್ಚು ಗಮನಹರಿಸಿ ಚಿಕಿತ್ಸೆ ನೀಡಿ ಎಂದು ಆರೋಗ್ಯ ಇಲಾಖೆ ಆಯುಕ್ತರು ವೈದ್ಯರಿಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಈವರೆಗೆ 19 ಸಾವು ಸಂಭವಿಸಿದ್ದು, ಇದರಲ್ಲಿ ಬಹುತೇಕರು ದೀರ್ಘಕಾಲೀನ ಅನಾರೋಗ್ಯ ಸಮಸ್ಯೆ ಹೊಂದಿದ್ದರು.