ಭಕ್ತರನ್ನು ಬೆರಗಾಗಿಸಿದ ಒನಕೆ, ಕಳಸ ಕರಗ ನೃತ್ಯ

| Published : May 26 2024, 01:30 AM IST

ಸಾರಾಂಶ

ಸುಮಾರು ೫ ಅಡಿ ಉದ್ದದ ಒನಕೆ ಮೇಲೆ ನೀರು ತುಂಬಿದ ತಾಮ್ರದ ಪಾತ್ರೆಯನ್ನಿಟ್ಟು ಒನಕೆಯನ್ನು ತಲೆಯ ಮೇಲಿಟ್ಟುಕೊಂಡು ಅದರಲ್ಲಿನ ವಸಂತದ ನೀರನ್ನು ನೃತ್ಯ ಪ್ರದರ್ಶನದ ಮೂಲಕ ಹೊರಚೆಲ್ಲುವ ಕರಗದ ಪೂಜಾರಿ ಮಂಜುನಾಥ್‌ರ ಕಲಾ ಪ್ರೌಢಿಮೆ ಮೆರೆದರು

ಕನ್ನಡಪ್ರಭ ವಾರ್ತೆ ಕೋಲಾರನಗರದ ಪಿ.ಸಿ.ಬಡಾವಣೆಯ ರೇಣುಕಾಂಭ ಸೇವಾ ಸಮಿತಿ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ ಕರಗ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಒನಕೆ ಕರಗದ ನೃತ್ಯ ಜನಮನ ಸೂರೆಗೊಂಡಿತು.ಸುಮಾರು ೫ ಅಡಿ ಉದ್ದದ ಒನಕೆ ಮೇಲೆ ನೀರು ತುಂಬಿದ ತಾಮ್ರದ ಪಾತ್ರೆಯನ್ನಿಟ್ಟು ಒನಕೆಯನ್ನು ತಲೆಯ ಮೇಲಿಟ್ಟುಕೊಂಡು ಅದರಲ್ಲಿನ ವಸಂತದ ನೀರನ್ನು ನೃತ್ಯ ಪ್ರದರ್ಶನದ ಮೂಲಕ ಹೊರಚೆಲ್ಲುವ ಕರಗದ ಪೂಜಾರಿ ಮಂಜುನಾಥ್‌ರ ಕಲಾ ಪ್ರೌಢಿಮೆಯ ಸಾಹಸಕ್ಕೆ ಜನ ತಲೆದೂಗಿದರು.೩೨ನೇ ವರ್ಷದ ಮಹೋತ್ಸವ

ಒನಕೆಯನ್ನು ಕೈಯಿಂದ ಹಿಡಿಯದೇ ಒಂದು ತುದಿಯ ಮೇಲೆ ನೀರು ತುಂಬಿದ ಪಾತ್ರೆಯಿಟ್ಟು, ಮತ್ತೊಂದು ತುದಿಯನ್ನು ತಲೆ ಮೇಲಿಟ್ಟುಕೊಂಡು ನರ್ತಿಸುವ ಮೂಲಕ ಜನತೆ ನಿಬ್ಬೆರಗಾಗುವಂತೆ ಮಾಡಿದರು. ೩೨ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಒನಕೆ ಕರಗ ನೃತ್ಯಕ್ಕೂ ಮುನ್ನಾ ವಸಂತದ ನೀರು ತುಂಬಿದ ಏಳು ಕಳಸಗಳನ್ನು ಒಂದರ ಮೇಲೊಂದರಂತೆ ಜೋಡಿಸಿಕೊಂಡು ತಲೆಯ ಮೇಲಿಟ್ಟು ಮಾಡಿದ ನೃತ್ಯ ಮನಮೋಹಕವಾಗಿತ್ತು.

ಒನಕೆಯ ಮೇಲಿನ ತಾಮ್ರದ ಪಾತ್ರೆಯಲ್ಲಿರುವ ವಸಂತದ ನೀರು ನಮ್ಮ ಮೇಲೆ ಬಿದ್ದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು, ಸುಮಾರು ೧ ಗಂಟೆಗೂ ಹೆಚ್ಚು ಕಾಲ ನಡೆದ ಒನಕೆ, ಕಳಸಗಳನ್ನೊತ್ತ ನೃತ್ಯ ನಡೆಯಿತು. ರಸ್ತೆಯ ಇಕ್ಕೆಲಗಳು, ಮನೆಗಳ ಮೇಲೆ ಸಾವಿರಾರು ಜನ ನಿಂತು ಕರಗ ವೀಕ್ಷಿಸಿದರು.

ಹೂವಿನ ಕರಗ ಮಹೋತ್ಸವದಲ್ಲಿ ಒನಕೆ ಕರಗಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು, ಕರಗ ಮಹೋತ್ಸವದ ಸಮಾರೋಪವಾಗಿಯೂ ವಸಂತೋತ್ಸವವೂ ಇದೇ ಆಗಿರುತ್ತದೆ.