ಒನಕೆ ಓಬವ್ವ ತನ್ನ ಅಪ್ರತಿಮ ಧೈರ್ಯ ಮತ್ತು ಸಾಹಸದಿಂದ ನಾಡಿನ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾಳೆ
ಕಂಪ್ಲಿ: ಒನಕೆ ಓಬವ್ವ ಕೇವಲ ಐತಿಹಾಸಿಕ ವೀರ ಮಹಿಳೆಯಲ್ಲ, ಧೈರ್ಯ, ಸಾಹಸ, ದೇಶಪ್ರೇಮ, ಸ್ವಾಭಿಮಾನ ಹಾಗೂ ಸಮಯಪ್ರಜ್ಞೆಯ ಮೂಲಕ ಇಂದಿನ ಮಹಿಳೆಯರಿಗೂ ಆದರ್ಶವಾಗಿರುವ ವೀರ ವನಿತೆಯಾಗಿದ್ದಾಳೆ ಎಂದು ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ. ದಾನಪ್ಪ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕಾಡಳಿತದಿಂದ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಮಾತನಾಡಿದರು.ಒನಕೆ ಓಬವ್ವ ತನ್ನ ಅಪ್ರತಿಮ ಧೈರ್ಯ ಮತ್ತು ಸಾಹಸದಿಂದ ನಾಡಿನ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾಳೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಶತ್ರುಗಳನ್ನು ಎದುರಿಸಿದ ಆಕೆಯ ಸಾಹಸಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಮಹಿಳೆ ಅಬಲೆಯಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಸಾಮರ್ಥ್ಯ ಸಾಬೀತುಪಡಿಸುವ ಸಬಲೆಯಾಗಿದ್ದಾಳೆ. ಮಹಿಳೆಯರಿಗೆ ಸೂಕ್ತ ಅವಕಾಶ, ಶಿಕ್ಷಣ ಮತ್ತು ಪ್ರೋತ್ಸಾಹ ದೊರೆತರೆ ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು ಎಂದರು.
ಹೆಣ್ಣು-ಗಂಡು ಎಂಬ ಲಿಂಗ ತಾರತಮ್ಯ ಮಾಡದೆ ಪ್ರತಿಯೊಂದು ಮಗುವಿಗೂ ಸಮಾನ ಶಿಕ್ಷಣ ಹಾಗೂ ಅವಕಾಶ ಕಲ್ಪಿಸುವ ಜವಾಬ್ದಾರಿ ಪೋಷಕರು ಮತ್ತು ಸಮಾಜದ ಮೇಲಿದೆ. ಮಹಿಳೆಯರು ಶಿಕ್ಷಣದ ಮೂಲಕ ಸ್ವಾವಲಂಬಿಗಳಾಗಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಒನಕೆ ಓಬವ್ವಳ ದೇಶಪ್ರೇಮ, ಧೈರ್ಯ, ಸ್ವಾಭಿಮಾನ ಮತ್ತು ಸಮಯಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವ ಗುಣ ಇಂದಿನ ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಮಹನೀಯರ ಜಯಂತಿ ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತುವ ಕೆಲಸವಾಗಬೇಕು ಎಂದು ತಿಳಿಸಿದರು.ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಕೆ.ಲಕ್ಷ್ಮಣ ಮಾತನಾಡಿ, ಒನಕೆ ಓಬವ್ವಳ ಸಾಹಸ ಮತ್ತು ಶೌರ್ಯ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಆಕೆಯ ಹೆಸರಿನಲ್ಲಿ ಸೂಕ್ತ ಸ್ಮಾರಕ ಹಾಗೂ ವೃತ್ತ ಅಭಿವೃದ್ಧಿಪಡಿಸಬೇಕು. ಈಗಿರುವ ಒನಕೆ ಓಬವ್ವ ವೃತ್ತ ಆಧುನಿಕ ರೀತಿಯಲ್ಲಿ ಸುಂದರವಾಗಿ ನಿರ್ಮಿಸುವ ಮೂಲಕ ಐತಿಹಾಸಿಕ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಬೇಕು. ಪಟ್ಟಣದ ಪ್ರಮುಖ ರಸ್ತೆ ಹಾಗೂ ಸಾರ್ವಜನಿಕ ಸಮುಚ್ಚಯಗಳಿಗೆ ಒನಕೆ ಓಬವ್ವಳ ಹೆಸರಿಡುವ ಮೂಲಕ ಯುವಜನರಲ್ಲಿ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ವೀರ ಮಹಿಳೆಯರ ಸಾಧನೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ಪ್ರಭಾರಿ ಉಪ ತಹಸೀಲ್ದಾರ್ ಎಸ್.ಡಿ. ರಮೇಶ್, ಚಲವಾದಿ ಮಹಾಸಭಾದ ತಾಲೂಕಾಧ್ಯಕ್ಷ ಸಿ.ಎ. ಚನ್ನಪ್ಪ, ಬಾವಿಕಟ್ಟೆ ಚನ್ನಬಸವರಾಜ, ಅಧಿಕಾರಿ ಕೆ.ವಿರುಪಾಕ್ಷಿ, ಮಾಲತೇಶ ದೇಶಪಾಂಡೆ, ಟಿ.ಎಂ.ಬಸವರಾಜ, ನರಸಪ್ಪ, ಜಿ.ಪಂಪಾಪತಿ, ಬಿ.ವಿರೂಪಾಕ್ಷಗೌಡ, ರಾಧಾ, ವನಿತಾ, ವೈಷ್ಣವಿ, ರೂಪಿಣಿ, ಶಿಲ್ಪಾ, ಸುಮಾರ, ಸಂಗೀತಾ, ನೀಲಕಂಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.