ಒನಕೆ ಓಬವ್ವನ ಸಾಹಸ ಯುವ ಪೀಳಿಗೆಗೆ ಪ್ರೇರಕ

| Published : Nov 11 2024, 11:46 PM IST

ಸಾರಾಂಶ

ಸಮಯಪ್ರಜ್ಞೆ ಮತ್ತು ತನ್ನ ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡೆದು ಕನ್ನಡ ನಾಡನ್ನು ರಕ್ಷಣೆ ಮಾಡಿರುವ ವೀರ ರಾಣಿ ಒನಕೆ ಓಬವ್ವ ರವರು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಒನಕೆ ಓಬವ್ವಳ ಸಾಹಸ ಮನೋಭಾವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒನಕೆ ಓಬವ್ವರ ಹೆಸರು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದ ಸಾಹಸ ಚರಿತೆ. ಅವರನ್ನು ಕರ್ನಾಟಕದ ವೀರ ವನಿತೆಯರಾದ ಕಿತ್ತೂರಿನ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಸಾಧನೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸರ್ಕಾರ ಓಬವ್ವನ ಜಯಂತಿಯನ್ನು ಆಚರಿಸುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು. ನಗರದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕೋಟೆ ರಕ್ಷಿಸಿದ ಓಬವ್ವ

ಚಿತ್ರದುರ್ಗ ಎಂಬುದು ನಮಗೆಲ್ಲ ಸ್ಫೂರ್ತಿಯಾಗಿದೆ, ವೀರಮದಕರಿ ನಾಯಕನ ಕಾಲದಲ್ಲಿ ಶೋಷಿತರ ವರ್ಗದಲ್ಲಿ ಹುಟ್ಟಿದ ಓಬವ್ವ ವೀರಮದಕರಿ ನಾಯಕನ ಕೋಟೆಯನ್ನು ಉಳಿಸಿದ್ದು ಚರಿತ್ರೆಯ ಪುಟದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗಿದೆ. ಒನಕೆ ಓಬವ್ವ ತನ್ನ ಗಂಡ ಕಹಳೆ ಮದ್ದ ಹನುಮಪ್ಪನಿಗೆ ಊಟವನ್ನು ಬಡಿಸಿದ ಸಂದರ್ಭದಲ್ಲಿ ಶತ್ರು ಸೈನಿಕರು ಆಗಮನವಾದಾಗ ಅದನ್ನು ಮನಗಂಡು ಊಟ ಮಾಡುತ್ತಿದ್ದ ಗಂಡನಿಗೆ ತೊಂದರೆಯಾಗದಂತೆ ಒನಕೆಯಿಂದ ಶತ್ರುಗಳನ್ನು ಸದೆಬಡಿದು ಆ ಒಂದು ಸಾಮ್ರಾಜ್ಯವನ್ನು ರಕ್ಷಣೆ ಮಾಡುವುದರಲ್ಲಿ ಯಶಸ್ಸು ಕಂಡರು ಎಂದು ಬಣ್ಣಿಸಿದರು.

ಯುವ ಪೀಳಿಗೆಗೆ ಪ್ರೇರಣೆ

ಉಪನ್ಯಾಸಕ ಮುನಿರಾಜು.ಎಂ.ಅರಿಕೆರೆ ಮಾತನಾಡಿ, ಸಮಯಪ್ರಜ್ಞೆ ಮತ್ತು ತನ್ನ ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡೆದು ಕನ್ನಡ ನಾಡನ್ನು ರಕ್ಷಣೆ ಮಾಡಿರುವ ವೀರ ರಾಣಿ ಒನಕೆ ಓಬವ್ವ ರವರು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಜಿಲ್ಲಾಡಳಿತ ವೀರ ಮಹಿಳೆ ಓಬವ್ವ ಜಯಂತಿಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಿದೆ. ಒನಕೆ ಓಬವ್ವ ಅವರ ಸಾಹಸ ಮನೋಭಾವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ರಾಷ್ಟ್ರಕ್ಕೆ, ನಾಡಿಗೆ ನಿಸ್ವಾರ್ಥ ಉತ್ತಮ ನಾಗರಿಕರಾಗಬೇಕು ಎಂದರು.

ವಸ್ತುನಿಷ್ಠ ಚರಿತ್ರೆಯನ್ನು ಅರಿಯಬೇಕು. ಅದೇ ರೀತಿ ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಒನಕೆ ಓಬವ್ವ ಅವರ ಸಾಧನೆ ಮಹತ್ವದು. ಯುದ್ಧದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರೂ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಹೈದರಾಲಿ ಸೈನಿಕರ ವಿರುದ್ಧ ಹೋರಾಡಿದ ಓಬವ್ವ ಅವರ ಆದರ್ಶಗಳು ನಮ್ಮೆಲ್ಲರಿಗೂ ಬೆಳಕಾಗಬೇಕು ಎಂದು ಹೇಳಿದರು.

ಸಾಧಕರಿಗೆ ಸನ್ಮಾನ:

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ಜನಾಂಗದ ಮುಖಂಡರು, ಹೋರಾಟಗಾರರು, ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ಜನಾಂಗದ ಅಧಿಕಾರಿಗಳಿಗೆ ಸುಷ್ಮಾ ಶ್ರೀನಿವಾಸ್, ಲಕ್ಷ್ಮೀನರಸಮ್ಮ, ಸೌಭಾಗ್ಯಮ್ಮ, ಪ್ರಮೀಳಾ ಮಹಿಳಾ ಸಾಧಕರಿಗೆ ಸನ್ಮಾನಿಸಲಾಯಿತು ಮತ್ತು ಎಸ್. ಎಸ್. ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನಾ ಒನಕೆ ಓಬವ್ವ ರವರ ಪಲ್ಲಕ್ಕಿ ಮತ್ತು ಸ್ತಬ್ಧ ಚಿತ್ರಗಳು ಜಾನಪದ ಕಲಾ ತಂಡಗಳೊಂದಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಅಂಬೇಡ್ಕರ್ ವೃತ್ತ, ಬಿಬಿ ರಸ್ತೆ, ಎಂಜಿ ರಸ್ತೆಯ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದವರೆಗೆ ಸಂಭ್ರಮದಿಂದ ಮೆರವಣಿಗೆ ಜರುಗಿತು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಎಸಿ ಅಶ್ವಿನ್, ತಹಸೀಲ್ದಾರ್ ಅನಿಲ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ಧೇಶಕ ವೆಂಕಟೇಶ್ ರೆಡ್ಡಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ ಮತ್ತಿತರರು ಇದ್ದರು.