ಸಾರಾಂಶ
ಉಡುಪಿ ಕೇರಳ ಕಲ್ಚರಲ್ ಅಂಡ್ ಸೋಷಲ್ ಸೆಂಟರ್ ಇದರ 31ನೇ ವಾರ್ಷಿಕೋತ್ಸವ ಹಾಗೂ ಓಣಂ ಹಬ್ಬವು ನಗರದ ಶಾಮಿಲಿ ಸಭಾಭವನದಲ್ಲಿ ಸಂಭ್ರಮದಿಂದ ನೆರವೇರಿತು. ಕಾರ್ಯಕ್ರಮವನ್ನು ಪ್ರಖ್ಯಾತ ಸಿನಿಮಾ ನಟ ಮುಕೇಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ, ಉಡುಪಿ
ಉಡುಪಿ ಕೇರಳ ಕಲ್ಚರಲ್ ಅಂಡ್ ಸೋಷಲ್ ಸೆಂಟರ್ ಇದರ 31ನೇ ವಾರ್ಷಿಕೋತ್ಸವ ಹಾಗೂ ಓಣಂ ಹಬ್ಬವು ನಗರದ ಶಾಮಿಲಿ ಸಭಾಭವನದಲ್ಲಿ ಸಂಭ್ರಮದಿಂದ ನೆರವೇರಿತು. ಕಾರ್ಯಕ್ರಮವನ್ನು ಪ್ರಖ್ಯಾತ ಸಿನಿಮಾ ನಟ ಮುಕೇಶ್ ಉದ್ಘಾಟಿಸಿ, ಉಡುಪಿಯ ಎಲ್ಲಾ ಮಲಯಾಳಿ ಸಮುದಾಯಕ್ಕೆ ಹೃತ್ಪೂರ್ವಕ ಓಣಂ ಹಾರೈಕೆಗಳನ್ನು ತಿಳಿಸಿದರು. ಮುಖ್ಯ ಅತಿಥಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಡುಪಿಯ ಮಲಯಾಳಿ ಸಮುದಾಯದ ಏಕತೆ, ಶ್ರಮ ಮತ್ತು ಸಂಸ್ಕೃತಿಯನ್ನು ಉಳಿಸುವ ಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿ ಎಸ್‌ಪಿ. ಹರಿರಾಮ್ ಶಂಕರ್, ಲಯನ್ಸ್ ಜಿಲ್ಲಾ ಸಂಸ್ಕೃತಿ ಸಂಯೋಜಕ ರಂಜನ್ ಕಲ್ಕುರ, ಮಾಹೆ. ನ್ಯಾಚುರಲ್ ಸೈನ್ಸಸ್ ನಿರ್ದೇಶಕ ಡಾ. ಚೆರಿಯನ್ ವರ್ಗೀಸ್ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಟ್ರಸ್ಟಿ ಅಭಿಲಾಶ್ ಪಿ.ವಿ. ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಸುಗುಣ ಕುಮಾರ್ ಅಧ್ಯಕ್ಷತೆ ವಹಿಸಿ, ಆತ್ಮೀಯ ಸ್ವಾಗತ ಕೋರಿದರು. ಕಾರ್ಯದರ್ಶಿ ಬಿನೇಶ್ ವಿ.ಸಿ. ವಾರ್ಷಿಕ ವರದಿಯನ್ನು ಮಂಡಿಸಿದರು. ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ.ಆರ್. ಧನ್ಯವಾದಗಳನ್ನು ಅರ್ಪಿಸಿದರು. ಮನೋಜ್ ಕಡಬ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 2000ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೂವಿನ ರಂಗೋಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಉತ್ಸವಗಳು ಮತ್ತು ಸಮಾಜ ಬಾಂಧವ್ಯದಿಂದ ಸಮೃದ್ಧವಾದ ಈ ಮಹೋತ್ಸವ, ಓಣಂ ಹಬ್ಬದ ನಿಜವಾದ ಆತ್ಮವನ್ನು ಹಾಗೂ ಸಂಸ್ಥೆಯ 31 ವರ್ಷದ ಸಾಂಸ್ಕೃತಿಕ ಪ್ರಯಾಣವನ್ನು ಪ್ರತಿಬಿಂಬಿಸಿತು.