ಸಾರಾಂಶ
ಮುಂಡರಗಿ: ಎಪ್ಪಾ ತುಂಗಭದ್ರಾ ನದಿ ತುಂಬಿ ಬಂದಾಗೊಮ್ಮೆ ಹುಡ್ರು, ಹುಪ್ಡಿ, ಕಟಗೊಂಡು, ದನಾ-ಕರಾ ಹೊಡ್ಕೊಂಡು, ಮನ್ಯಾಗಿನ್ ಸಾಮಾನೆಲ್ಲಾ ಕಿತ್ಗೊಂಡ್ ಓಡಿ ಬಂದ್ ಬಂದ್ ಸಾಕಾಗೈತಿ. ಇದರಿಂದ ನಮಗ ಮುಕ್ತಿ ಕೊಡಸ್ರೀ ಎಂದು ಮುಂಡರಗಿ ತಾಲೂಕಿನ ವಿಠಲಾಪುರ ಗ್ರಾಮದ ನಿವಾಸಿ ಮಲ್ಲಪ್ಪ ಹರಿಜನ ತಮ್ಮ ಅಳಲನ್ನು ಜಿಲ್ಲಾಧಿಕಾರಿ ಎದುರು ತೊಡಿಕೊಂಡರು.
ಗುರುವಾರ ಸಂಜೆ 5.30ರ ನಂತರ ತುಂಗಭದ್ರಾ ನದಿಗೆ ಹೆಚ್ಚಿನ ನೀರು ಹರಿದು ಬಂದ ಹಿನ್ನೆಲೆ ನದಿ ತೀರದಲ್ಲಿರುವ ತಾಲೂಕಿನ ವಿಠಲಾಪುರ ಗ್ರಾಮದ ತಗ್ಗು ಪ್ರದೇಶದಲ್ಲಿರುವ ಸುಮಾರು 16 ರಿಂದ 20 ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಶುಕ್ರವಾರ ಗದಗ ಜಿಲ್ಲಾಧಿಕಾರಿ ವಿಠಲಾಪುರ ಗ್ರಾಮಕ್ಕೆ ಆಗಮಿಸಿ ಕಾಳಜಿ ಕೇಂದ್ರದಲ್ಲಿರುವವರನ್ನು ಭೇಟಿ ಮಾಡಿದ ವೇಳೆ ಗ್ರಾಮಸ್ಥರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.2009 ರಿಂದ 3 ಬಾರಿ ನದಿ ತುಂಬಿ ನಮ್ಮೂರಿಗೆ ನೀರು ನುಗ್ಗಿದೆ, ಆದ್ರ ಇದೂವರೆಗೂ ಅದರ ಬಗ್ಗೆ ಶಾಶ್ವತ ಪರಿಹಾರ ಮಾಡಿಲ್ರಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಮಾತನಾಡಿ, ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ನೀರು ನುಗ್ಗಿರುವ ಎಲ್ಲ ಮನೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮುಂಡರಗಿ ತಹಸೀಲ್ದಾರರಿಗೆ ಸೂಚನೆ ನೀಡಿದ್ದು. ಅದರಂತೆ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ಮೂಲಕ ನೀರು ನುಗ್ಗಿದ ಸುಮಾರು 16 ರಿಂದ 20 ಕುಟುಂಬಗಳನ್ನು ತಕ್ಷಣವೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿ ಕಾಳಜಿ ಕೇಂದ್ರ ಪ್ರಾರಂಭಿಸಿ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.ಶುಕ್ರವಾರ ಸಂಜೆವರೆಗೆ ನೀರು ಕಡಿಮೆಯಾಗುವ ಸಾಧ್ಯತೆ ಇದ್ದು, ನೀರು ಕಡಿಮೆಯಾದ ನಂತರ ತಾವು ಮನೆಗೆ ಹೋದಾಗ ತಮಗೆ ತಕ್ಷಣವೇ ಅಡುಗೆ ಮಾಡಿಕೊಂಡು ಊಟ ಮಾಡಲು ತಹಸೀಲ್ದಾರ್ 20 ಕುಟುಂಬಗಳಿಗೂ ದಿನಸಿ ಆಹಾರ ಧಾನ್ಯಗಳ ಕಿಟ್ ತಂದಿದ್ದು, ಅವುಗಳನ್ನು ಪಡೆದುಕೊಳ್ಳಬೇಕು ಎಂದರು.
ಶೀತ ಗಾಳಿಯಿಂದ ಯಾರಿಗಾದರೂ ಆರೋಗ್ಯದಲ್ಲಿ ಸಮಸ್ಯೆಯಾದರೆ ಇಲ್ಲಿಯೇ ವೈದ್ಯರನ್ನು ನೇಮಿಸಿದ್ದು, ಅವರಿಂದ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮಳೆ ನೀರು ಹೊಕ್ಕ ಮನೆಗಳಿಗೆ ತಕ್ಷಣವೇ ತಲಾ ₹5 ಸಾವಿರ ಪರಿಹಾರದ ಚೆಕ್ಕನ್ನು ವಿತರಿಸುವಂತೆ ಜಿಲ್ಲಾಧಿಕಾರಿ ತಹಸೀಲ್ದಾರ ಧನಂಜಯ ಮಾಲಗತ್ತಿ ಅವರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಎಸ್ಪಿ ಬಿ.ಎಸ್. ನೇಮಗೌಡ, ತಹಸೀಲ್ದಾರ್ ಧನಂಜಯ ಮಾಲಗತ್ತಿ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್ಐ ಸುಮಾ ಗೋರಬಾಳ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಬಿದರಳ್ಳಿ ಗ್ರಾಪಂ ಅಧ್ಯಕ್ಷ ಸುನಿತಾ ಹಾರೋಗೇರಿ, ಉಪಾಧ್ಯಕ್ಷ ಗೌರಮ್ಮ ಶಿರಹಟ್ಟಿ, ರತ್ನವ್ವ ತಳವಾರ, ಕುಮಾರಗೌಡ ಪಾಟೀಲ, ದುರಗಪ್ಪ ಹರಿಜನ, ನಿಂಗಪ್ಪ ಸ್ವಾಗಿ, ಮಹೇಶ ಸುಂಕದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.