ಒಂದೂವರೆ ಎಕರೆಯಲ್ಲಿ ಸಾವಯವ ತೋಟಗಾರಿಕೆ: ವಾರ್ಷಿಕ 9 ಲಕ್ಷ ರು. ಆದಾಯ ಗಳಿಕೆ

| Published : Jun 27 2025, 12:48 AM IST

ಒಂದೂವರೆ ಎಕರೆಯಲ್ಲಿ ಸಾವಯವ ತೋಟಗಾರಿಕೆ: ವಾರ್ಷಿಕ 9 ಲಕ್ಷ ರು. ಆದಾಯ ಗಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಟಿ.ನರಸೀಪುರ ತಾಲೂಕು ಯಾಚೇನಹಳ್ಳಿಯ ವೈ.ಕೆ. ಚಂದ್ರು ಅವರು ಒಂದೂವರೆ ಎಕರೆಯಲ್ಲಿ ಸಾವಯವ ತೋಟಗಾರಿಕೆ ಮಾಡುತ್ತಿದ್ದು, ವಾರ್ಷಿಕ 9 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ. ಅವರಿಗೆ ಜಮೀನಿಗೆ ನೀರಾವರಿ ಸೌಲಭ್ಯವೂ ಇದೆ. ಒಂದು ಕೊಳವೆ ಬಾವಿಯನ್ನು ಕೂಡ ಕೊರೆಸಿದ್ದಾರೆ. 900 ಅಡಿಕೆ ಮರಗಳಿವೆ. ಅರ್ಧ ಎಕರೆಯಲ್ಲಿ 30 ವರ್ಷಗಳ ಹಿಂದೆ ನೆಟ್ಟಿರುವ ಮರಗಳಿವೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಟಿ.ನರಸೀಪುರ ತಾಲೂಕು ಯಾಚೇನಹಳ್ಳಿಯ ವೈ.ಕೆ. ಚಂದ್ರು ಅವರು ಒಂದೂವರೆ ಎಕರೆಯಲ್ಲಿ ಸಾವಯವ ತೋಟಗಾರಿಕೆ ಮಾಡುತ್ತಿದ್ದು, ವಾರ್ಷಿಕ 9 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ಅವರಿಗೆ ಜಮೀನಿಗೆ ನೀರಾವರಿ ಸೌಲಭ್ಯವೂ ಇದೆ. ಒಂದು ಕೊಳವೆ ಬಾವಿಯನ್ನು ಕೂಡ ಕೊರೆಸಿದ್ದಾರೆ. 900 ಅಡಿಕೆ ಮರಗಳಿವೆ. ಅರ್ಧ ಎಕರೆಯಲ್ಲಿ 30 ವರ್ಷಗಳ ಹಿಂದೆ ನೆಟ್ಟಿರುವ ಮರಗಳಿವೆ. ಒಂದು ಎಕರೆಯಲ್ಲಿ 17 ವರ್ಷಗಳ ಹಿಂದೆ ನೆಟ್ಟಿರುವ ಮರಗಳಿವೆ. ಜಮೀನಿನನ ಬಳಿಯೇ ಬಂದು ತೆಂಗು ಖರೀದಿಸುತ್ತಿದ್ದು, ವಾರ್ಷಿಕ 6 ಲಕ್ಷ ರು. ಆದಾಯವಿದೆ.

40 ತೆಂಗಿನ ಮರಗಳಿವೆ. ವಾರ್ಷಿಕ 1.80 ಲಕ್ಷ ರು.ವರೆಗೆ ಆದಾಯವಿದೆ. ಇವರ ಮನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರೆ. ಏಲಕ್ಕಿ 30-40 ಗಿಡಗಳಿವೆ. 12 ಕೆಜಿ ಇಳುವರಿ ಬಂದಿತ್ತು. ಪ್ರತಿ ಕೆಜಿಗೆ 2,200 ರು.ಗೆ ಮಾರಾಟ ಮಾಡಿದ್ದಾರೆ. ಕಾಳಮೆಣಸು-15 ಗಿಡಗಳಿವೆ, ಹೊಸದಾಗಿ 300 ಗಿಡಗಳನ್ನು ಹಾಕಿದ್ದಾರೆ. ಜುಲೈನಲ್ಲಿ ಇನ್ನೂ 300 ಗಿಡಗಳನ್ನು ಹಾಕುವ ಉದ್ದೇಶವಿದೆ. ಹಳೆಯ ಗಿಡಗಳಿಂದ 60 ಕೆಜಿ ಇಳುವರಿ ಬಂದಿತ್ತು. ಪ್ರತಿ ಕೆಜಿಗೆ 700 ರು.ಗಳಂತೆ ಮಾರಾಟ ಮಾಡಿದ್ದಾರೆ.

ಏಲಕ್ಕಿ ಬಾಳೆ 200-300 ಗಿಡಗಳಲ್ಲಿ ಫಲ ಬಂದಿದೆ. ಹೊಸದಾಗಿ ಮೂರ್ನಾಲ್ಕು ಸಾವಿರ ಗಿಡಗಳನ್ನು ಹಾಕಿದ್ದಾರೆ. ಬದುಗಳಲ್ಲಿ ಕಾಫಿ ಕೂಡ ಇದ್ದು, 15 ಕೆಜಿ ಪುಡಿ ಮಾಡಲಾಗಿತ್ತು. ಮನೆ ಬಳಕೆಯಾಗಿ ಉಳಿದಿದ್ದನ್ನು ಕೆಜಿಗೆ 800 ರು.ನಂತೆ ಮಾರಾಟ ಮಾಡಲಾಗಿದೆ.

ಮೊಸಂಬಿ, ಸಪೋಟ, ಸೇಬು, ಜಾಯ್‌ಕಾಯ್‌, ಫ್ಯಾಷನ್‌ ಫ್ರೂಟ್‌, ಸೀಬೆ ಮತ್ತಿತರ ಹಣ್ಣುಗಳುಂಟು. ಇದಲ್ಲದೇ ತಾವರೆ, ಕಣಗಲೆ, ನಂದಿಬಟ್ಟಲು, ಮೂರು ಬಗೆಯ ದಾಸವಾಳ ಇವೆ. ಇದಲ್ಲದೇ ಮೆಣಸಿನಕಾಯಿ, ಬೀನ್ಸ್‌ ಕೂಡ ಬೆಳೆಯುತ್ತಾರೆ.

ಮುಂಚೆ ಕಬ್ಬು, ಭತ್ತ ಕೂಡ ಬೆಳೆಯುತ್ತಿದ್ದರು. ಒಂದು ಮಲೆನಾಡು ಗಿಡ್ಡ ಹಸುವಿದ್ದು, ಹಾಲು, ಮೊಸರು, ತುಪ್ಪ ಮನೆ ಬಳಕೆಗೆ ಆಗುತ್ತದೆ. ಒಟ್ಟಾರೆ ಎಲ್ಲಾ ಬೆಳೆಗಳಿಂದ ವಾರ್ಷಿಕ 1.50 ಲಕ್ಷ ರು. ವೆಚ್ಚವಾಗಲಿದ್ದು, 9 ಲಕ್ಷ ರು. ನಿವ್ಲಳ ಲಾಭ ಬರುತ್ತದೆ.

ತೋಟಗಾರಿಕೆ ಇಲಾಖೆಯಿಂದ ಹತ್ತು ಸಾವಿರ ರು. ನಗದು ಹಾಗೂ ಪ್ರಮಾಣಪತ್ರ, 2010 ರಲ್ಲಿ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ದೊರೆತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇಬ್ಬರು ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಸಂಪರ್ಕ ವಿಳಾಸ

ವೈ.ಕೆ. ಚಂದ್ರು ಬಿನ್‌ ಮಿಶಿನ್‌ ಕೆಂಪೇಗೌಡ

ಯಾಚೇನಹಳ್ಳಿ

ಬನ್ನೂರು ಹೋಬಳಿ

ಟಿ, ನರಸೀಪುರ ತಾಲೂಕು

ಮೈಸೂರು ಜಿಲ್ಲೆ

ಮೊ.99022 03618
ಭೂಮಿಗೆ ವಿಷ ಹಾಕಬೇಡಿ. ಒಳ್ಳೆಯ ಭೂಮಿ ಇಟ್ಟುಕೊಳ್ಳಿ, ಸಾವಯವ ಕೃಷಿ ಮಾಡಿ. ಆಗ ಒಳ್ಳೆಯ ಲಾಭ ಮಾಡಬಹುದು.

- ವೈ.ಕೆ. ಚಂದ್ರು, ಯಾಚೇನಹಳ್ಳಿಮನೆಯ ಹೆಸರು ‘ಭೂಮಿಯ ಋಣ’

ವೈ.ಕೆ. ಚಂದ್ರು ಅವರ ‘ಮನೆಯ ಹೆಸರು ಭೂಮಿಯ ಋಣ’. ಎಲ್ಲರೂ ಭೂಮಿಯನ್ನು ಭೂಮಿ ತಾಯಿ ಎನ್ನುತ್ತಾರೆ. ಭೂಮಿ ತಾಯಿ ನಮಗೆ ಅನ್ನ ನೀಡುತ್ತಾಳೆ. ಪ್ರಕೃತಿಯ ಮುಂದೆ ನಾವೇನು ಮಾಡಲಾಗದು. ನಾವೆಲ್ಲಾ ಕೊನೆಗೆ ಮಣ್ಣಿಗೆ ಹೋಗುತ್ತೇವೆ. ಹೀಗಾಗಿ ಆ ತಾಯಿಯ ಋಣ ನಮ್ಮ ಮೇಲಿರುತ್ತದೆ. ಆದ್ದರಿಂದಲೇ ಈ ಹೆಸರು ಇಟ್ಟಿದ್ದೇನೆ ಎನ್ನುತ್ತಾರೆ ವೈ.ಕೆ. ಚಂದ್ರು.