ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಬೆಂಗಳೂರು- ಮೈಸೂರು ಷಟ್ಪಥ ಕಾಮಗಾರಿ ಉದ್ಘಾಟನೆಗೊಂಡ ಒಂದೂವರೆ ವರ್ಷಕ್ಕೆ ಕುಸಿಯಲಾರಂಭಿಸಿದ್ದು, ತಡೆಗೋಡೆ ರಸ್ತೆ ಬದಿಗೆ ವಾಲಿಕೊಂಡಿದ್ದು ಹೆದ್ದಾರಿಯಲ್ಲಿ ಸಂಚರಿಸುವವರು ಜೀವಭಯದಲ್ಲಿ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಹಳೇ ಬೂದನೂರು ಸಮೀಪ ಹಾದುಹೋಗಿರುವ ಹೆದ್ದಾರಿಗೆ ಅಳವಡಿಸಿರುವ ಬ್ಲಾಕ್‌ಗಳು ಒಂದೆಡೆಗೆ ವಾಲಿಕೊಂಡಂತಿದ್ದು, ಸರ್ವೀಸ್ ರಸ್ತೆಯಲ್ಲಿ ಪ್ರಯಾಣಿಸುವವರೂ ಆತಂಕದಲ್ಲೇ ಸಂಚರಿಸುವಂತಾಗಿದೆ.ಹಳೇ ಬೂದನೂರು ಗ್ರಾಮಸ್ಥರು ಹೆದ್ದಾರಿ ತಡೆಗೋಡೆಯ ಸಿಮೆಂಟ್ ಬ್ಲಾಕ್‌ಗಳು ಒಂದು ಕಡೆಗೆ ವಾಲಿಕೊಂಡಿರುವುದನ್ನು ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ವಾಲಿಕೊಂಡಿರುವ ತಡೆಗೋಡೆಗೆ ತೇಪೆ ಹಾಕುವ ಕೆಲಸ ಆರಂಭಿಸಿದ್ದಾರೆ. ತೇಪೆ ಹಾಕಿದರೂ ಪ್ರಯೋಜನವಾಗುವುದಿಲ್ಲ ಎನ್ನುವುದು ಗ್ರಾಮಸ್ಥರು ಹೇಳುವ ಮಾತಾಗಿದೆ.
೨೦೨೩ರ ಮಾರ್ಚ್ ೧೨ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟಿಸಲು ಆಗಮಿಸುತ್ತಿದ್ದರು. ಕಾಮಗಾರಿಯನ್ನು ಪೂರ್ಣಗೊಳಿಸುವ ತರಾತುರಿಯಲ್ಲಿ ಗುತ್ತಿಗೆದಾರ ಕಂಪನಿಯಾದ ಕೆಎಂಡಿಎಲ್ ೪ ಕಿ.ಮಿ.ಉದ್ದದ ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಿತ್ತು.ಕಾಮಗಾರಿ ಕಳಪೆಯಿಂದ ಕೂಡಿರುವುದನ್ನು ಸ್ಥಳೀಯ ಗ್ರಾಮಸ್ಥರು ಅಂದೇ ಆರೋಪಿಸಿದ್ದರು. ಆದರೂ ಕಂಪನಿ ಎಚ್ಚೆತ್ತುಕೊಳ್ಳಲಿಲ್ಲ. ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು-ಸಿಬ್ಬಂದಿಯೂ ತಲೆಕೆಡಿಸಿಕೊಳ್ಳಲಿಲ್ಲ. ಆತುರಾತುರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕೈತೊಳೆದುಕೊಂಡಿದ್ದರು. ಹಳೇಬೂದನೂರು ಗ್ರಾಮಸ್ಥರು ಆ ಸಮಯದಲ್ಲೇ ಗ್ರಾಮದ ಬಳಿ ನಿರ್ಮಾಣವಾಗಿದ್ದ ಅಂಡರ್ ಪಾಸಸ್ ರಸ್ತೆ ಬಳಿ ತಡೆಗೋಡೆಗಳು ವಾಲಿರುವ ಬಗ್ಗೆ ದೂರು ನೀಡಿದ್ದರು. ಇದರ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ನೆರವೇರಿಸಿದ್ದರು.
ಹಳೇ ಬೂದನೂರು ಗ್ರಾಮದ ಅಂಡರ್‌ಪಾಸ್ ಮೇಲಿನ ಹೆದ್ದಾರಿ ರಸ್ತೆ ಅಲ್ಪ ಪ್ರಮಾಣದಲ್ಲಿ ಕುಸಿತವಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಡಾಂಬರೀಕರಣಗೊಂಡಿರುವ ರಸ್ತೆಯ ಕೆಳಭಾಗದ ಮಣ್ಣು ಕುಸಿತಕ್ಕೊಳಗಾಗಿ ಸಿಮೆಂಟ್ ಬ್ಲಾಕ್‌ಗಳು ವಾಲಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಬಹುಮುಖ್ಯವಾಗಿ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ರಸ್ತೆ ಕುಸಿತವಾಗಿದ್ದು, ವಾಹನ ಸವಾರರು ವಾಹನ ಗುಂಡಿಗೆ ಬಿದ್ದಾಗ ಗಲಿಬಿಲಿಗೊಳ್ಳುವುದು ಸಾಮಾನ್ಯವಾಗಿದೆ.ಹೆದ್ದಾರಿಯ ತಡೆಗೋಡೆ ವಾಲಿಕೊಂಡಿರುವುದನ್ನು ಗಮನಿಸಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಲಿಕೊಂಡಿರುವ ಸಿಮೆಂಟ್ ಬ್ಲಾಕ್‌ಗಳ ಬಳಿ ರಂಧ್ರಕೊರೆದು ಕಬ್ಬಿಣದ ರಾಡು ಹಾಗೂ ಸಿಮೆಂಟ್ ತುಂಬುವ ಕಾರ್ಯ ನಡೆಸುತ್ತಿದ್ದಾರೆ. ಈ ಕಾಮಗಾರಿಯಿಂದ ತಡೆಗೋಡೆಗೆ ಭದ್ರತೆ ಒದಗಿಸುವುದು ಕಷ್ಟವಾಗಲಿದೆ. ಸಿಮೆಂಟ್ ಬ್ಲಾಕ್‌ಗಳನ್ನು ಕಳಚಿಯೇ ಸುಭದ್ರವಾಗಿ ಕಾಮಗಾರಿ ನಡೆಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಕಬ್ಬಿಣದ ರಾಡು, ಕಾಂಕ್ರೀಟ್ ತುಂಬುವ ಕೆಲಸಹೆದ್ದಾರಿ ತಡೆಗೋಡೆ ವಾಲಿಕೊಂಡಿರುವ ಕಡೆಗಳಲ್ಲಿ ಸಿಮೆಂಟ್ ಬ್ಲಾಕ್‌ಗಳನ್ನು ಮತ್ತೆ ಕಳಚಿ ಹೊಸದಾಗಿ ಕಾಮಗಾರಿ ನಡೆಸುವುದು ಸುಲಭದ ಮಾತಲ್ಲ. ಹಾಗಾಗಿ ತಡೆಗೋಡೆ ವಾಲಿರುವುದನ್ನು ತಡೆಯಲು ಹೆದ್ದಾರಿ ಪ್ರಾಧಿಕಾರ ಕಬ್ಬಿಣದ ರಾಡು ಅಳವಡಿಸಲು ರಂಧ್ರಗಳನ್ನು ಮಾಡಿ ಜೊತೆಗೆ ಕಾಂಕ್ರೀಟ್ ತುಂಬುವ ಕೆಲಸ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಇದೂ ಸಹ ಅವೈಜ್ಞಾನಿಕ, ಕಳಪೆ ಕಾಮಗಾರಿ ಎಂಬ ದೂರು ಸ್ಥಳೀಯರಿಂದ ವ್ಯಕ್ತವಾಗಿದೆ. ಕೆಲ ದಿನಗಳವರೆಗೆ ಹೆದ್ದಾರಿ ಸಂಚಾರ ಬಂದ್ ಮಾಡಿಸಿ ವೈಜ್ಞಾನಿಕವಾಗಿ ಹೆದ್ದಾರಿ ಕುಸಿತಗೊಂಡಿರುವ ಕಡೆಗಳಲ್ಲಿ ಸಿಮೆಂಟ್ ಬ್ಲಾಕ್‌ಗಳನ್ನು ತೆಗೆದು ಹೊಸದಾಗಿ ಜೋಡಿಸಿದಾಗ ಭದ್ರತೆ ಒದಗಿಸಬಹುದು ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ.ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕತೆಯಿಂದ ಕೂಡಿರುವುದಾಗಿ ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆದ್ದಾರಿ ನಿರ್ಮಿಸಿರುವ ದಿಲೀಪ್ ಬಿಲ್ಡ್ ಕಾನ್ ಕಂಪನಿಯವರು ಕಳಪೆ ಕಾಮಗಾರಿ ನಡೆಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು.
- ಪಿ.ರವಿಕುಮಾರ್, ಶಾಸಕರು, ಮಂಡ್ಯ