ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಿಕ್ಷಣದಲ್ಲಿ ತಾರತಮ್ಯ ನಿವಾರಿಸಲು ಅವಶ್ಯಕವಾಗಿರುವ ಒಂದು ದೇಶ ಒಂದು ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಬೇಕಿದೆ ಎಂದು ಎಂದು ಪ್ರೊ.ಕೃಷ್ಣರಾಜ್ ಒತ್ತಾಯಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ವತಿಯಿಂದ ನಡೆದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿಚಾರ ಸಂಕಿರಣ ಹಾಗೂ ಐಎಎಸ್ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ಗ್ರಾಮೀಣ ಮಕ್ಕಳು ಇಂದಿಗೂ ಬೋರ್ಡ್‌ನಲ್ಲಿ ಅಕ್ಷರ ಕಲಿತರೇ ಖಾಸಗಿ ಶಾಲೆಗಳಲ್ಲಿ ತಂತ್ರಜ್ಞಾನದ ಮೂಲಕ ಶಿಕ್ಷಣ ಕಲಿಸುತ್ತಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಗ್ರಾಮೀಣ ಮಕ್ಕಳು ಹರಸಹಾಸ ಪಡುವಂತಹ ಸನ್ನಿವೇಷ ಎದುರಾಗಿದೆ. ಏಕ ಶಿಕ್ಷಣ ಜಾರಿಯಾದರೇ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ಸಿಗುವಂತಾಗುತ್ತದೆ ಎಂದು ಹೇಳಿದರು.ದೇಶದಲ್ಲಿ ಅರ್ಥಿಕತೆ, ಶಿಕ್ಷಣ ಅಸಮಾನತೆ ಇರುವುದರಿಂದ ಇಂದಿಗೂ ಕೂಡ ಭಾರತ ದೇಶ ಅಭಿವೃದ್ದಿಯಲ್ಲಿ ಮುಂದುವರೆಯುತ್ತಿರುವ ರಾಷ್ಟ್ರವಾಗಿದೆ. ದೇಶದ ಬಹುಪಾಲು ಸಂಪತ್ತು ಕೆಲವೇ ಜನರಲ್ಲಿ ಅಡಗಿರುವುದರಿಂದ ದೇಶ ಅಭಿವೃದ್ದಿಯಲ್ಲಿ ಕುಂಠಿತ ಕಂಡಿದೆ ಎಂದರು.ಯುಪಿಎಸ್‌ಸಿ ಸಾಧಕ ಬಿಎಸ್ ಚಂದನ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ಓದಿಗೆ ಅಡೆತಡೆಗಳು ಹೆಚ್ಚಾಗುತ್ತಿರುವುದರಿಂದ ಮೊಬೈಲ್ ಬಳಕೆಯಿಂದ ದೂರವಾಗಬೇಕು ಎಂದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜವಾಬ್ದಾರಿಯೂ ಹೆಚ್ಚಾಗಿರುತ್ತದೆ. ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರದೇ ಮನುಷ್ಯರಲ್ಲಿ ಪರಿಪೂರ್ಣತೆಯನ್ನು ರೂಪಿಸುವುದೇ ಶಿಕ್ಷಣವಾಗಬೇಕೆಂದು ಕಿವಿಮಾತು ಹೇಳಿದರು.
ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಬಿ.ಎಸ್ ಶಿವಣ್ಣ ಮಾತನಾಡಿ, ಕೂಲಿ ಮಾಡುವ ಮಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರೇ, ಶ್ರೀಮಂತರ ಮಗ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದು, ಇದರಿಂದಾಗಿ ಶಿಕ್ಷಣದಲ್ಲಿ ತಾರತಮ್ಯ ಹೆಚ್ಚಾಗುತ್ತಿರುವುದರಿಂದ ಬಡವ ಶ್ರೀಮಂತರ ಮಕ್ಕಳಿಗೆ ಸಮಾನ ಶಿಕ್ಷಣ ಸಿಗಬೇಕು. ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ ಎಲ್ಲಾ ವಿಷಯ ಪಠ್ಯ ಪುಸ್ತಕಗಳನ್ನು ಆಯಾ ಪ್ರಾದೇಶಕ ಭಾಷೆಯಲ್ಲಿಯೇ ನೀಡಬೇಕೆಂದು ಒತ್ತಾಯಿಸಿದರು.ಲೋಹಿಯಾ ವಿಚಾರ ವೇದಿಕೆಯಿಂದ ನಿರಂತರವಾಗಿ ಉದ್ಯೋಗಮೇಳ, ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ಆರೋಗ್ಯ ಕಿಟ್ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಸಮಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಗೆ ಸಂವಿಧಾನ, ಅಂಬೇಡ್ಕರ್, ಲೋಹಿಯಾ, ಕುವೆಂಪು, ಕನಕದಾಸರು ಸೇರಿದಂತೆ ಮಹನೀಯರ ಜೀವನ ಚರಿತ್ರೆಯನ್ನು ತಿಳಿಸುವ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಇದೇ ವೇಳೆ ಯುಪಿಎಸ್‌ಸಿ ಸಾಧಕ ಚಂದನ್ ಅವರನ್ನು ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಡಿವೈಎಸ್ಪಿ ಕೃಷ್ಣಪ್ಪ, ಬಿಇಒ ಎಸ್.ಚಂದ್ರಪಾಟೀಲ್, ಕುರುಬರ ಸಂಘದ ರಾಜ್ಯ ನಿರ್ದೇಶಕ ಪುಟ್ಟಬಸವಯ್ಯ, ಕ್ಷೇತ್ರ ಸಮಾನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಚಿತ್ರ ಕಲೆ ನಿರ್ದೇಶಕ ಮಳವಳ್ಳಿ ಶ್ರೀನಿವಾಸ್, ಸಮಾಜ ಸೇವಕ ತಳಗವಾದಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.