ರಾಜ್ಯದ ಲಿಂಗಾಯತ ಮಕ್ಕಳ ಶಿಕ್ಷಣ ಮತ್ತು ಯುವಕರ ಉದ್ಯೋಗಕ್ಕಾಗಿ ಸರ್ಕಾರ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ 1 ದಿನದ ಉಪವಾಸ ಸತ್ಯಾಗ್ರಹ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ನರಗುಂದ
ರಾಜ್ಯದ ಲಿಂಗಾಯತ ಮಕ್ಕಳ ಶಿಕ್ಷಣ ಮತ್ತು ಯುವಕರ ಉದ್ಯೋಗಕ್ಕಾಗಿ ಸರ್ಕಾರ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ 1 ದಿನದ ಉಪವಾಸ ಸತ್ಯಾಗ್ರಹ ಮಾಡಲಾಗುವುದೆಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.ಪಟ್ಟಣದ ಪಂಚಮ ಸಾಲಿ ಸಮಾಜದ ಕಚೇರಿಯಲ್ಲಿ ಸಮಾಜದ ಸಭೆಯಲ್ಲಿ ಮಾತನಾಡಿ, ಲಿಂಗಾಯತ ಪಂಚಮಸಾಲಿಗಳ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ರಾಜ್ಯ ಸರ್ಕಾರದ 2ಎ ಮೀಸಲಾತಿ ಮತ್ತು ಲಿಂಗಾಯತ ಉಪಸಮಾಜಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಹಕ್ಕೊತ್ತಾಯಿಸಿ 6 ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಡಿ.10ಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಹತ್ತಿರ ಲಿಂಗಾಯತರ ಮೇಲೆ ಆದಂತಹ ದೌರ್ಜನ್ಯದ ಸ್ಥಳದಲ್ಲಿಯೇ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದರು.
ನಾವು ಹಲವು ಬಾರಿ ಮೌನ ಪ್ರತಿಭಟನೆ ಮಾಡಿದ್ದೇವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಲಾಗಿದೆ. ಅವರು ಸ್ಪಂದಿಸುತ್ತಿಲ್ಲ. ನಮ್ಮ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವುದು ಅನಿವಾರ್ಯ ಆಗಿದೆ. ಆದರೂ ಎರಡು ವರ್ಷದ ಹಿಂದೆ ಇದೇ ಬೆಳಗಾವಿ ಸುವರ್ಣ ಸೌಧ ಹತ್ತಿರ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಪಂಚಮಸಾಲಿಗಳ ರಾಜ್ಯ ಸರ್ಕಾರ ಲಾಠಿ ಚಾರ್ಜ್ ಮಾಡುವ ಮೂಲಕ ದೌರ್ಜನ್ಯ ಎಸಗಿತ್ತು. ಈಗ ಅದೇ ಸ್ಥಳದಲ್ಲಿ 2ಎ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಹೇಳಿದರು.ಈ ಸಂದರ್ಭ ಎಂ.ಬಿ. ಮೆಣಸಗಿ, ಅಯ್ಯಪ್ಪ ಅಂಗಡಿ, ಶಿವಪ್ಪ ಬೋಳಶೆಟ್ಟಿ, ಶಿವಪುತ್ರಪ್ಪ ಹುಂಬಿ, ಎಸ್.ಎಸ್. ಪಾಟೀಲ, ಮಹಾದೇವಪ್ಪ ಗೌಳಿ, ಬಸವರಾಜ ಮೇಟಿ, ಪ್ರವೀಣ ಅಳಗವಾಡಿ, ಪಡಿಯಪ್ಪ ಕೊಳ್ಳಿಯವರ, ಈರಣ್ಣ ಕುರಹಟ್ಟಿ, ಮಹೇಶ ಹಟ್ಟಿ, ಸಂಗಪ್ಪ ಪೂಜಾರ, ನವೀನಗೌಡ ಪಾಟೀಲ, ಈಶ್ವರಗೌಡ ಪಾಟೀಲ, ಪರಪ್ಪ ಸಾಹುಕಾರ, ಹನುಂತಗೌಡ ಪಾಟೀಲ ಇದ್ದರು.