ಸಾರಾಂಶ
ಶಿವಮೊಗ್ಗದ ಜೀವನ ಸಂಜೆ ವೃದ್ಧಾಶ್ರಮಕ್ಕೆ ಹೊರನಾಡು ಶ್ರೀ ಕ್ಷೇತ್ರದಿಂದ ಶ್ರೀ ಮಾತಾ ಪ್ರಶಸ್ತಿ ವಿತರಣೆ । ಧರ್ಮಕರ್ತರ 34ನೇ ವರ್ಷದ ಪಟ್ಟಾಭಿಷೇಕೋತ್ಸವ
ಕನ್ನಡಪ್ರಭ ವಾರ್ತೆ, ಮೂಡಿಗೆರೆಆತ್ಮ ಪರಮಾತ್ಮರ ಮಧ್ಯ ಇರುವಂತಹ ವೇದ ಕಲ್ಪನೆ ಇದೆ. ಅದರ ಅನುಷ್ಠಾನ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ಸನಾತನ ಧರ್ಮದಲ್ಲಿ ನಮ್ಮ ಕ್ಷೇತ್ರಗಳು ಯಾವುದೇ ರೀತಿ ಜಾತಿ ಬೇಧವಿಲ್ಲದೆ ಮೇಲು ಕೀಳು ಭಾವವಿಲ್ಲದೆ ಬಡವ ಬಲ್ಲಿದ ಎನ್ನದೆ ನಮ್ಮ ಸಮಾಜ ಒಟ್ಟಾಗುವ ಕೇಂದ್ರ ಧಾರ್ಮಿಕ ಕೇಂದ್ರಗಳು ಎಂದು ಕಾಸರಗೋಡುವಿನ ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ಲಲಿತ ಕಲಾಮಂಟಪದಲ್ಲಿ ನಡೆದ ಶ್ರೀಶರನ್ನವರಾತ್ರಿ ಮಹೋತ್ಸವ ಜೀವ-ಭಾವ ಶ್ರೀ ನವಗ್ರಹ ಹೋಮ ಮತ್ತು ಧರ್ಮಕರ್ತರ 34ನೇ ವರ್ಷದ ಪಟ್ಟಾಭಿಷೇಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಆತ್ಮದಲ್ಲಿ ಪರಮಾತ್ಮನನ್ನು ಕಂಡಾಗ ಇನ್ನೊಬ್ಬರ ಕಷ್ಟ ನಮ್ಮ ಕಷ್ಟ ಎನ್ನುವುದು ಭಾಸವಾಗುತ್ತದೆ. ಆದ್ದರಿಂದ ಬಹಳಷ್ಟು ಸಾಮಾಜಿಕ ಕಾರ್ಯಗಳು ಕ್ಷೇತ್ರದಲ್ಲಿ ನಡೆಯಲು ಕಾರಣವಾಗುತ್ತದೆ ಎಂದು ಹೇಳಿದರು.ಹೊರನಾಡು ದೇವಸ್ಥಾನದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಉತ್ತರ ಭಾರತ ಪ್ರವಾಸ ಮಾಡಿದ ಸಂದರ್ಭದಲ್ಲಿ ಅಲ್ಲಿ ನೋಡಿದ ಅನುಭವ ನನಗೆ ಈ ಜೀವ- ಭಾವ ಕಾರ್ಯಕ್ರಮ ಮಾಡಲು ಪ್ರೇರಣೆಯಾಯಿತು ಎಂದರು.
ದೇಹದ ಹೊರಭಾಗವನ್ನು ನಾವು ಎಷ್ಟು ಶುದ್ಧವಾಗಿಟ್ಟುಕೊಳ್ಳುತ್ತೇವೇಯೋ ಹಾಗೆಯೇ ಅಂತರಂಗದ ಭಾವನೆಯನ್ನು ಶುದ್ಧವಾಗಿಟ್ಟು ಕೊಳ್ಳಬೇಕು. ಯಾವತ್ತು ಭಾವ ಕೆಡುವಂತ ವ್ಯವಸ್ಥೆಗೆ ಕಾರಣವಾಗುತ್ತದೋ ಅದರಿಂದ ಬದುಕು ಕಷ್ಟ ಕಾರ್ಪಣ್ಯಕ್ಕೆ ಒಳಗಾಗುತ್ತದೆ. ಭಾವನಾತ್ಮಕ ವಾಗಿ ನಮ್ಮ ಬದುಕನ್ನು ಸೃಜನಶೀಲವನ್ನಾಗಿ ಮಾಡಿಕೊಳ್ಳಬೇಕು. ಅಂತರಂಗದ ಶುದ್ಧತೆಯಲ್ಲಿ ನಮ್ಮ ಜೀವನ ಸಾಗಬೇಕು ಎಂದು ಹೇಳಿದರು.ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಯಾವುದೇ ಒಂದು ಕ್ಷೇತ್ರ ಅದಕ್ಕೆ ತನ್ನದೇ ಆದಂತಹ ತಾಯಿ ಆಶೀರ್ವಾದ ಅನುಗ್ರಹ ಇರುತ್ತದೆ. ಇದರ ಜೊತೆಗೆ ಆ ಕ್ಷೇತ್ರಕ್ಕೆ ಧೀಮಂತ ನಾಯಕತ್ವ ಇರುತ್ತದೆ. ಯಾವ ಕೇತ್ರದಲ್ಲಿ ಅಲ್ಲಿ ಪರಂಪರೆ ಹಾಗೂ ಅನುಗ್ರಹದ ಜೊತೆಗೆ ಧಾರ್ಮಿಕ ನಾಯಕತ್ವ ಎಲ್ಲಿ ಸಿಗುತ್ತೋ ಆ ಕ್ಷೇತ್ರ ಸಹಜವಾಗಿ ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತದೆ ಎಂದರು.ಭೀಮೇಶ್ವರ ಜೋಷಿ ಈ ಕ್ಷೇತ್ರಕ್ಕೆ ನಾಯಕತ್ವ ಕೊಡುವ ಜೊತೆಗೆ ಸಾಮಾಜಕ್ಕೂ ನಾಯಕತ್ವ ಕೊಟ್ಟಿದ್ದಾರೆ. ಸಂಸ್ಕಾರಯುತ ವ್ಯಕ್ತಿಗೆ ಜೀವ ಮಾತ್ರ ಮುಖ್ಯವಲ್ಲ, ಭಾವ, ಮಾತೃ ಹೃದಯ ಬೇಕು. ಕ್ಷೇತ್ರದ ನಾಯಕತ್ವ ಯಾರು ವಹಿಸಿಕೊಳ್ಳುತ್ತಾರೋ ಅವರಿಗೆ ಮಾತೃ ಹೃದಯ ಅಗತ್ಯ ಇದೆ ಅದನ್ನು ಈ ಕ್ಷೇತ್ರದಲ್ಲಿ ಕಾಣಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಜೀವನ ಸಂಜೆ ವೃದ್ಧಾಶ್ರಮ ನಡೆಸುತ್ತಿರುವ ಜ್ಞಾನೇಶ್ವರೀ ಜನ ಸೇವಾ ಟ್ರಸ್ಟ್‌ಗೆ ಒಂದು ಲಕ್ಷ ರು. ಸಹಿತ ಶ್ರೀ ಮಾತಾ ಪ್ರಶಸ್ತಿ ನೀಡಲಾಯಿತು.ಪಟ್ಟಾಭಿಷೇಕ ಮಹೋತ್ಸವದ ದಿನದ ಅಂಗವಾಗಿ ಧರ್ಮಕರ್ತರಿಂದ ಶ್ರೀ ಮಾತೆಗೆ ಅಭಿಷೇಕ, ವಿಶೇಷ ಪೂಜೆ ಮತ್ತು ಶ್ರೀ ಕ್ಷೇತ್ರದಲ್ಲಿ ಸಪ್ತಶತಿ , ನಾಲ್ಕುವೇದಗಳು, ಸುಂದರಕಾಂಡ , ಶ್ರೀ ದೇವಿ ಭಾಗವತಾ ಪಾರಾಯಣ, ಕುಂಕುಮಾರ್ಚನೆ ಮತ್ತು ಸಪರಿವಾರ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಹೊರನಾಡು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಿ.ರಾಮನಾರಾಯಣ ಜೋಷಿ, ಟ್ರಸ್ಟಿಗಳಾದ ರಾಜಲಕ್ಷ್ಮೀ ಬಿ. ಜೋಷಿ, ಗಿರಿಜಾಶಂಕರ ಜೋಷಿ ಹಾಗೂ ಜ್ಞಾನೇಶ್ವರೀ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಹಾಲಪ್ಪ ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸುಧೀರ್ ಭಟ್ ಪೆರ್ಡೂರು ಮತ್ತು ಬಳಗದವರಿಂದ ಚಂದ್ರಾವಳಿ ವಿಲಾಸ ಯಕ್ಷಗಾನ ಪ್ರಸಂಗ ನಡೆಯಿತು. 15 ಕೆಸಿಕೆಎಂ 3ಶಿವಮೊಗ್ಗದಲ್ಲಿ ಜೀವನ ಸಂಜೆ ವೃದ್ಧಾಶ್ರಮ ನಡೆಸುತ್ತಿರುವ ಜ್ಞಾನೇಶ್ವರೀ ಜನ ಸೇವಾ ಟ್ರಸ್ಟ್‌ಗೆ ನೀಡಿದ ಶ್ರೀ ಮಾತಾ ಪ್ರಶಸ್ತಿಯನ್ನು ಅಧ್ಯಕ್ಷ ಎಂ. ಹಾಲಪ್ಪ ಸ್ವೀಕರಿಸಿದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳ್, ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಜೋಷಿ ಇದ್ದರು.