ಟೊಮ್ಯಾಟೋ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಮಾರುಕಟ್ಟೆಯಲ್ಲಿ ಇದೀಗ ಸಿಗುತ್ತಿರುವ ಬೆಲೆಯಿಂದ ರೈತರ ಮೊಗದಲ್ಲಿ ಸಂತೋಷ ಅರಳಿದೆ. ಕಳೆದ ಮೇನಿಂದ ನವೆಂಬರ್ ತಿಂಗಳ ಮಧ್ಯ ಟೊಮ್ಯಾಟೋ ಹೇರಳವಾಗಿ ಬೆಳೆದು ಬೆಲೆ ಸಿಗದೆ ಪರದಾಡಿದ ರೈತರು ಮಾರುಕಟ್ಟೆಯಲ್ಲಿ ಟೊಮ್ಯಾಟೋ ರಾಶಿ ರಾಶಿ ಬಿಸಾಡಿ ಹೋಗಿದ್ದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದೊಂದು ತಿಂಗಳಿನಿಂದ ಟೊಮ್ಯಾಟೋ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ನಗರದ ಹಾಪ್ ಕಾಮ್ಸ್ ಗಳಲ್ಲಿ ಉತ್ತಮ ದರ್ಜೆಯ ಟೊಮ್ಯಾಟೋ ಕೆಜಿಗೆ 80 ರು. ಇದೆ. ಹೊರಗೆ ತಳ್ಳುವ ಗಾಡಿಯಲ್ಲಿ ಕೆಜಿ ಟೊಮ್ಯಾಟೋ 90 ರು.ಗೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಗೆ ಹೋಗುವ ಟೊಮ್ಯಾಟೋ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗುತ್ತಿದೆ.ಪ್ರತಿದಿನ ಮಾರುಕಟ್ಟೆಗೆ 800 ರಿಂದ 1000 ಬಾಕ್ಸ್ ಟೊಮ್ಯಾಟೋ ಬರುತ್ತಿವೆ, ಉತ್ತಮ ಟೊಮ್ಯಾಟೋ ಎಂದೇ ಹೆಸರು ಪಡೆದಿರುವ ಸಾಹು ಎಂಬ ಹೈಬ್ರೀಡ್ ಟೊಮ್ಯಾಟೋ ಬಾಕ್ಸ್ ಒಂದಕ್ಕೆ 800 ರಿಂದ 1000 ರು.ಗಳವರೆಗೂ ಮಾರಾಟವಾಗುತ್ತಿದೆ.
ಚಿಕ್ಕಬಳ್ಳಾಪುರದ ಚಿಂತಾಮಣಿ ಎಪಿಎಂಸಿಯಲ್ಲಿ 14 ಕೆಜಿಯುಳ್ಳ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 600 ರಿಂದ 800 ವರೆಗೆ ಮಾರಾಟವಾಗುತ್ತಿದೆ, ಮೀಡಿಯಂ ಕ್ವಾಲಿಟಿ 14 ಕೆಜಿ ಬಾಕ್ಸ್ ಬೆಲೆ 500ರಿಂದ 600 ರು.ವರೆಗೆ ಮಾರಾಟ, ಲಾಸ್ಟ್ ಕ್ವಾಲಿಟಿ 14 ಕೆಜಿ ಬಾಕ್ಸ್ ಒಂದಕ್ಕೆ 400ರಿಂದ 500 ರು. ವರೆಗೆ ಮಾರಾಟ ಹಾಗೂ ಗೋಲಿ ಗಾತ್ರದ ಟೊಮ್ಯಾಟೋ 14 ಕೆಜಿ ಬಾಕ್ಸ್ ಒಂದಕ್ಕೆ 350 ರಿಂದ 400 ರು. ವರೆಗೂ ಮಾರಾಟವಾಗಿದೆ.ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯ ಸದ್ಯದ ಟೊಮ್ಯಾಟೋ ದರ 14 ಕೆಜಿ ಬಾಕ್ಸ್ ಒಂದಕ್ಕೆ 500 ರಿಂದ 750 ರು. ವರೆಗೂ ಹರಾಜಾಗಿದೆ.
ಟೊಮ್ಯಾಟೋ ಬೆಲೆ ಕಳೆದ ಒಂದು ತಿಂಗಳ ಹಿಂದೆ ಕೆಜಿಗೆ ಕೇವಲ 15- 20 ರು.ಗಳಿಗೆ ಮಾರಾಟವಾಗುತ್ತಿತ್ತು. ಆದರೆ ಕ್ರಮೇಣ ಬೆಲೆ ಏರುತ್ತಾ ಸಾಗಿ ಈಗ 50 ರಿಂದ 90 ರು.ಗಳವರೆಗೆ ಮಾರಾಟ ಕಂಡಿದ್ದು, ಟೊಮ್ಯಾಟೋ ಬೆಳೆ ಕೈಗೆ ಬಂದಿರುವ ರೈತರಲ್ಲಿ ಮುಖದಲ್ಲಿ ಮಂದಹಾಸ ಮೂಡಿದೆ.ಟೊಮೇಟೊ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಶಾಕ್, ಬೆಳೆಗಾರರಲ್ಲಿ ಹರ್ಷ:
ಟೊಮ್ಯಾಟೋ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಮಾರುಕಟ್ಟೆಯಲ್ಲಿ ಇದೀಗ ಸಿಗುತ್ತಿರುವ ಬೆಲೆಯಿಂದ ರೈತರ ಮೊಗದಲ್ಲಿ ಸಂತೋಷ ಅರಳಿದೆ. ಕಳೆದ ಮೇನಿಂದ ನವೆಂಬರ್ ತಿಂಗಳ ಮಧ್ಯ ಟೊಮ್ಯಾಟೋ ಹೇರಳವಾಗಿ ಬೆಳೆದು ಬೆಲೆ ಸಿಗದೆ ಪರದಾಡಿದ ರೈತರು ಮಾರುಕಟ್ಟೆಯಲ್ಲಿ ಟೊಮ್ಯಾಟೋ ರಾಶಿ ರಾಶಿ ಬಿಸಾಡಿ ಹೋಗಿದ್ದರು.ಸದ್ಯ ಗ್ರಾಹಕರು ಮಾತ್ರ ಟೊಮ್ಯಾಟೋ ದರ ಕೇಳಿ ಕಂಗಾಲಾಗಿದ್ದು, 4- 5 ಕೆಜಿ ಕೊಳ್ಳುತ್ತಿದ್ದವರು ಈಗ ಅರ್ಧ, ಕಾಲು ಕೆಜಿ ಕೊಂಡು ಅಷ್ಟಕ್ಕೆ ಸಮಾಧಾನ ಗೊಂಡರೆ, ಇನ್ನು ಕೆಲವರು 10ರು. ಗೆ 100 ಗ್ರಾಂ ಕೊಂಡು ಸಂತೃಪ್ತರಾಗುತ್ತಿದ್ದಾರೆ. ಮತ್ತೆ ಕೆಲವರು ಟೊಮ್ಯಾಟೋ ಬಿಟ್ಟು ಹುಣಸೆ ಹಣ್ಣಿಗೆ ಮೊರೆ ಹೋಗಿದ್ದು, ಕೆಜಿಗೆ 160 ರು. ಇದ್ದ ಹುಣಸೆ ಹಣ್ಣುಗೆ 260 ರು.ಗಳಾಗಿದೆ.
----------