ಪ್ರತಿ ಕುಟುಂಬದಲ್ಲಿ ಒಬ್ಬರು ಸೈನ್ಯಕ್ಕೆ ಸೇರಬೇಕು: ನಿವೃತ್ತ ಯೋಧ ಯತಿರಾಜ್ ಸಲಹೆ
KannadaprabhaNewsNetwork | Published : Oct 14 2023, 01:00 AM IST
ಪ್ರತಿ ಕುಟುಂಬದಲ್ಲಿ ಒಬ್ಬರು ಸೈನ್ಯಕ್ಕೆ ಸೇರಬೇಕು: ನಿವೃತ್ತ ಯೋಧ ಯತಿರಾಜ್ ಸಲಹೆ
ಸಾರಾಂಶ
ಪ್ರತಿ ಕುಟುಂಬದಲ್ಲಿ ಒಬ್ಬರು ಸೈನ್ಯಕ್ಕೆ ಸೇರಬೇಕು: ನಿವೃತ್ತ ಯೋಧ ಯತಿರಾಜ್ ಸಲಹೆ
ಅಂಬೇಡ್ಕರ್ ವೃತ್ತದಲ್ಲಿ ಅಮೃತ ಕಲಶ ಯೋಜನೆಯಡಿ ಮಣ್ಣು- ಅಕ್ಕಿ ಹಸ್ತಾಂತರ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಸೈನ್ಯಕ್ಕೆ ಸೇರಿದರೆ ದೇಶ ಸೇವೆ ಮಾಡುವ ಸೌಭಾಗ್ಯ ಸಿಗಲಿದ್ದು ಪ್ರತಿ ಕುಟುಂಬದಿಂದ ಒಬ್ಬರು ಸೈನ್ಯಕ್ಕೆ ಸೇರಬೇಕು ಎಂದು ನಿವೃತ್ತ ಯೋಧ ಮುತ್ತಿನಕೊಪ್ಪ ಯತಿರಾಜ್ ಸಲಹೆ ನೀಡಿದರು. ಶುಕ್ರವಾರ ಪಟ್ಟಣದ ವಾಟರ್ ಟ್ಯಾಂಕ್ ಸಮೀಪ ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಏರ್ಪಡಿಸಿದ್ದ 75 ನೇ ಅಮೃತ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಅಮೃತ ಕಳಸ ಯೋಜನೆಯಡಿ ಮಣ್ಣು ಹಾಗೂ ಅಕ್ಕಿಯನ್ನು ಜಿಲ್ಲೆಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್ ಮಾತನಾಡಿ, ಕೇಂದ್ರದ ಸರ್ಕಾರದ ಆದೇಶದಂತೆ ಅಮೃತ ಕಳಸ ಯೋಜನೆಯಡಿ ಆಗಸ್ಟ್ 9 ರಿಂದ ಅಕ್ಟೋಬರ್ 31 ರ ಒಳಗೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಅಮೃತ ಕಳಸದಲ್ಲಿ ಮಣ್ಣು ಸಂಗ್ರಹಿಸಲಾಗಿತ್ತು. ಸಂಗ್ರಹಿಸಿದ ಮಣ್ಣನ್ನು ಇಂದು ಜಿಲ್ಲೆಗೆ ಹಸ್ತಾಂತರಿಸುತ್ತೇವೆ. ಮುಂದೆ ರಾಜ್ಯ ಸರ್ಕಾರ ದೆಹಲಿಗೆ ಕಳಿಸುತ್ತದೆ. ತಾಲೂಕಿನಲ್ಲಿ 5 ಕೆರೆಗಳಿಗೆ ಅಮೃತ ಸರೋವರ ಎಂದು ನಾಮಕರಣ ಮಾಡಿ ನಾಮಫಲಕ ಹಾಕಿ ಕೆರೆಗಳ ಸುತ್ತ ಗಿಡಗಳನ್ನು ನೆಟ್ಟಿದ್ದೇವೆ. ನಮ್ಮ ದೇಶದ ಇತಿಹಾಸ, ಪರಂಪರೆ, ಗಡಿ ಕಾಯುವ ಸೈನಿಕರ ಬಗ್ಗೆ ಯುವ ಜನರಿಗೆ ತಿಳಿಸುವುದೇ ಈ ಅಮೃತ ಕಳಸದ ಉದ್ದೇಶವಾಗಿದೆ ಎಂದರು. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಅಮೃತ ಮಹೋತ್ಸವದ ಅಮೃತ ಕಳಸ ಯೋಜನೆಯಡಿ ಮಣ್ಣಿನ ಜೊತೆಗೆ ಅಕ್ಕಿಯನ್ನು ಸೇರಿಸಲಾಗಿದೆ. ನರಸಿಂಹರಾಜಪುರ ತಾಲೂಕು ಭತ್ತದ ಕಣಜ ಎಂದು ಹೆಸರಾಗಿದ್ದು ಅಕ್ಕಿ ಸಂಗ್ರಹ ಸಹ ಮಾಡಲಾಗಿದೆ ಎಂದರು. ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆ ಕಂಡ ದೇಶ. ಇಲ್ಲಿ ಎಲ್ಲಾ ಧರ್ಮ, ಜಾತಿ ಜನರು ಪರಸ್ಪರ, ಪ್ರೀತಿ, ಸೌಹಾರ್ದತೆ ಯಿಂದ ಬಾಳುತ್ತಿದ್ದೇವೆ ಎಂದರು. ತಹಸೀಲ್ದಾರ್ ತನುಜ ಟಿ.ಸವದತ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ಅಜ್ಜಂಪುರದ ವೀರಗಾಸೆ ತಂಡದವರಿಂದ ವೀರಗಾಸೆ ನೃತ್ಯ ಏರ್ಪಡಿಸಲಾಗಿತ್ತು. ಸಭೆಯಲ್ಲ್ಲಿಪಟ್ಟಣ ಪಂಚಾಯಿತಿ ಸದಸ್ಯ ಕುಮಾರಸ್ವಾಮಿ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಮಾಜಿ ಸೈನಿಕರಾದ ಗಣೇಶ್, ಜೋನಿ, ಡೇವೀಸ್, ತಾಪಂ ಸಹಾಯಕ ನಿರ್ದೇಶಕ ಮನೀಶ್, ಪಿಎಸ್‌ಐ ಗುರು ಸಜ್ಜನ್, ಡಿಎಸ್‌ಎಸ್ ಮುಖಂಡ ಡಿ.ರಾಮು, ಸಮಾಜ ಕಲ್ಯಾಣ ಇಲಾಖೆ ನಿರಂಜನಮೂರ್ತಿ, ಸಿಡಿಪಿಒ ಇಲಾಖೆ ಕಾವ್ಯ, ತೋಟಗಾರಿಕೆ ಇಲಾಖೆ ಪುನೀತ್, ತಾಪಂ ಯೋಜನಾ ವ್ಯವಸ್ಥಾಪಕ ಸುಬ್ರಮಣ್ಯ, ಕಂದಾಯ ಇಲಾಖೆ ರೆವಿನ್ಯೂ ಇನ್ಸಪೆಕ್ಟರ್ ಎಚ್.ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದವರು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಮೆರವಣಿಗೆಯಲ್ಲಿ ತಾಲೂಕು ಪಂಚಾಯಿತಿಗೆ ತೆರಳಿ ಚಿಕ್ಕಮಗಳೂರಿನ ನೆಹರು ಯುವ ಕೇಂದ್ರದ ಪ್ರತಿನಿಧಿ ವಿನಯ ಅವರಿಗೆ ಮಣ್ಣು ಹಾಗೂ ಅಕ್ಕಿಯನ್ನು ಹಸ್ತಾಂತರಿಸಿ ರಾಷ್ಠ ಗೀತೆ ಹಾಡಲಾಯಿತು.