ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸರ್ಕಾರ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷ್ಷೆಗೆ ರಾಜ್ಯಾದ್ಯಾಂತ ಎಲ್ಲಾ ರೀತಿ ತಯಾರಿ ನಡೆಸಲಾಗಿದ್ದು, ಈ ಸಮೀಕ್ಷೆಗಾಗಿ ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ಒಟ್ಟು 1.60 ಲಕ್ಷ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಿಳಿಸಿದರು.ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಸಾಮಾಜಿ, ಶೈಕ್ಷಣಿಕ ಗಣತಿಯ ಸಮೀಕ್ಷೆ ನಡೆಸುವ ಶಿಕ್ಷಕರಿಗೆ ಗಣತಿ ಕಾರ್ಯ ಕಿಟ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆ ನೀಡಿದ ಭರವಸೆಯಂತೆ ಒಳಮೀಸಲಾತಿ ಜಾರಿಗೆ ತಂದೆವು. ಈಗ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಮಾಡಲು ಮುಂದಾಗಿದ್ದೇವೆ. ಈ ಮೂಲಕ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದೆ ಎಂದರು.
ಈಗಾಗಲೇ ಸರ್ಕಾರದ ಆದೇಶದಂತೆ ಸಮೀಕ್ಷೆಗೆ ನನ್ನ ಇಲಾಖೆಯಿಂದ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 1 ಕೋಟಿ ಮನೆಗಳಿದ್ದು, ಸಮೀಕ್ಷೆಗೆ ಇಲಾಖೆಯಿಂದ 1.60 ಲಕ್ಷ ಶಿಕ್ಷಕರನ್ನು ನೇಮಿಸಲಾಗಿದೆ. ಇನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5.50 ಲಕ್ಷ ಮನೆಗಳಿದ್ದು, 35000 ಶಿಕ್ಷಕರನ್ನು ನೇಮಿಸಲಾಗಿದೆ. ಜಿಲ್ಲಾಡಳಿತವೂ ಯಾವುದೇ ರೀತಿ ಸಮಸ್ಯೆಯಾಗದಂತೆ ಸಮೀಕ್ಷೆಯನ್ನು ನಡೆಸಬೇಕು. ಅಂತಹ ಸಂದರ್ಭ ಒದಗಿ ಬಂದರೆ ಇಲಾಖೆಯ ಕಾರ್ಯದರ್ಶಿ ಅಥವಾ ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತರ ಗಮನಕ್ಕೆ ತಂದು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಸಾಮಾನ್ಯ ಜನರಿಗೆ ನ್ಯಾಯವನ್ನು ಒದಗಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮೀಕ್ಷೆಯನ್ನು ಮಾಡಲು ಮುಂದಾಗಿದ್ದಾರೆ. ಸೆ.22 ರಿಂದ ಅ.7 ರವೆಗೆ ಈ ಸಮೀಕ್ಷೆ ನಡೆಯಲಿದ್ದು, ಜನರು ವಿರೋಧ ಪಕ್ಷಗಳ ಮಾತುಗಳಿಗೆ ಕಿವಿಕೊಡದೆ ಸಮೀಕ್ಷೆಗೆ ಸಹಕರಿಸಬೇಕು, ಸರಿಯಾದ ಮಾಹಿತಿ ನೀಡಬೇಕು. ಇದರಿಂದ ನಿಮ್ಮ ಹಕ್ಕಗಳನ್ನು ಪಡೆದುಕೊಳ್ಳಲು ಒಂದು ವ್ಯವಸ್ಥೆ ನಿರ್ಮಾಣವಾದಂತೆ ಆಗುತ್ತದೆ. ನಮ್ಮ ಇಲಾಖೆಯ ಶಿಕ್ಷಕರುಗಳು ನಿಗದಿತ ದಿನದೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಆಗದಿದ್ದರೆ ಮುಂದಿನ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಸಂವಿಧಾನದ ಜಾತ್ಯತೀತ ಆಶಯದಂತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆಯನ್ನು ನೆರವೇರಿಸಿರುವುದು ಅರ್ಥಪೂರ್ಣವಾಗಿದ್ದು, ಇದು ಸಂವಿಧಾನಕ್ಕೆ ಸಂದ ಗೌರವ. ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ನಮ್ಮ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗುತ್ತಿದೆ ಎಂದರು.ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ ದಿನದಿಂದ ವಿರೋಧ ಪಕ್ಷದವರು ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ . ಅಲ್ಲದೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದೆಂದು ತಡೆ ತರಲು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೂ ಅರ್ಜಿಯನ್ನು ಹಾಕಿದ್ದರು. ಸುಪ್ರೀಂ ಕೋರ್ಟ್ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಎತ್ತಿ ಹಿಡಿದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 8300 ಎಕರೆ ಅಡಕೆ ಬೆಳೆ ನಾಶವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ವರದಿ ಕೊಟ್ಟಿದ್ದಾರೆ. 80 ಕೋಟಿ ರು. ನಮ್ಮ ಶಿವಮೊಗ್ಗ ಬರುವ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಕ್ಕೂ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು.