ಪ್ರತಿ ಗ್ರಾಪಂಗೆ ಒಂದು ಮಾದರಿ ಶಾಲೆ: ಕೆ.ಎಚ್. ಮುನಿಯಪ್ಪ

| Published : Jul 10 2025, 01:45 AM IST

ಸಾರಾಂಶ

ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ ಮಾಡುವುದು ಸರ್ಕಾರದ ಆಶಯ. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣವನ್ನು ಬಡವರು, ರೈತರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ನೀಡಬೇಕು ಎಂಬುದು ನಮ್ಮ ತೀರ್ಮಾನ.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಒಂದು ಮಾದರಿ ಶಾಲೆ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಬ್ರಿಗೇಡ್ ಫೌಂಡೇಷನ್ ವತಿಯಿಂದ ಸಿ.ಎಸ್.ಆರ್ ಅನುದಾನದಡಿ ನಿರ್ಮಿಸಿರುವ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

2023 ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ಶಾಲೆಗಳ ನವೀಕರಣ ಗುಣಮಟ್ಟದ ವಿಧ್ಯಾಭ್ಯಾಸಕ್ಕೆ ಒತ್ತು ನೀಡಲು ನಮ್ಮ ಸರ್ಕಾರವು ಎಲ್ಲಾ ಖಾಸಗಿ ಸಂಸ್ಥೆಗಳೊಂದಿಗೆ ಒಗ್ಗೂಡಿ ಸಿಎಸ್‌ಆರ್ ಅನುದಾನದಡಿ ಶಾಲೆಗಳ ಅಭಿವೃದ್ಧಿಗೆ ತೀರ್ಮಾನ ಕೈಗೊಳ್ಳಲಾಯಿತು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ ಮಾಡುವುದು ಸರ್ಕಾರದ ಆಶಯ. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣವನ್ನು ಬಡವರು, ರೈತರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ನೀಡಬೇಕು ಎಂಬುದು ನಮ್ಮ ತೀರ್ಮಾನ. ಬಹುತೇಕ ಕಂಪನಿಗಳು ಸಿಎಸ್‌ಆರ್ ಅನುದಾನದಡಿ ಕಾನ್ವೆಂಟ್ ಮಾದರಿ ಶಾಲೆ ಅಭಿವೃದ್ಧಿಪಡಿಸಲು ಪಣ ತೊಡಲಾಗಿದೆ ಎಂದರು.

ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಿ ದೇಶ ಸೇವೆಯ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಕಟ್ಟಕಡೆಯ ವಿದ್ಯಾರ್ಥಿಗೂ ಸಮಾನತೆ ಸಿಗಬೇಕು. ಜಗತ್ತಿನ ಬಲಿಷ್ಟ ರಾಷ್ಟಗಳ ಜೊತೆ ಭಾರತ ಕೊಂಡೊಯ್ಯಲು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಹಾಗೇ ನಮ್ಮ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಾಭಿವೃದ್ಧಿ ಯೋಜನಾ ಪ್ರಾಧಿಕಾರದವರು ಸರ್ಕಾರಿ ಶಾಲೆಗಳ ಸುಧಾರಣೆಗೆ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.

ಈ ವೇಳೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬೈಲಾಂಜಿನಪ್ಪ.ಪಿ, ಬ್ರಿಗೇಡ್ ಫೌಂಡೇಷನ್ ಸಿ.ಇ.ಒ ಶಿವಯೋಗಿ ಸಿ ಕಳಸದ, ಬ್ರಿಗೇಡ್ ನಾರ್ಥ್ ಪ್ರಾಜೆಕ್ಟ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಬಾಲಸುಬ್ರಮಣ್ಯನ್ ಎಂ.ಎನ್, ಬಯಪ ಅಧ್ಯಕ್ಷರಾದ ವಿ.ಶಾಂತಕುಮಾರ್, ನೀರ್ದೇಶಕರಾದ ಪ್ರಸನ್ನ ಕುಮಾರ್, ಮಂಜುನಾಥ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರು ಸಿ.ಜಗನ್ನಾಥ್, ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ವೆಂಕಟಮ್ಮ ಉಪಸ್ಥಿತರಿದ್ದರು.