ಹಡಪದ ಅಪ್ಪಣ್ಣ ವಚನಕ್ರಾಂತಿಯ ಹರಿಕಾರರಲ್ಲೊಬ್ಬರು: ಡಾ ರೋಹಿಣಿ

| Published : Jul 25 2024, 01:23 AM IST

ಹಡಪದ ಅಪ್ಪಣ್ಣ ವಚನಕ್ರಾಂತಿಯ ಹರಿಕಾರರಲ್ಲೊಬ್ಬರು: ಡಾ ರೋಹಿಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್ ಮಾತನಾಡಿ, ಹಡಪದ ಅಪ್ಪಣ್ಣನವರು ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಬಹಳ ದಕ್ಷತೆ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಈ ನಿಷ್ಠೆ, ಕೆಲಸದಲ್ಲಿನ ದಕ್ಷತೆ ಹಾಗೂ ಅವರ ನಡೆ- ನುಡಿಗಳನ್ನು ಇಂದಿನ ಸಮಾಜವು ಅನುಸರಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಡಪದ ಅಪ್ಪಣ್ಣನವರು ಹನ್ನೆರಡನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಪ್ರಮುಖರಾಗಿದ್ದವರು. ತಮ್ಮ ವಚನಗಳ ಮೂಲಕ ಅಂದಿನ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವಲ್ಲಿ ಅಪಾರ ಸಾಧನೆ ಗೈದಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ರೋಹಿಣಿ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಉದ್ಘಾಟಿಸಿ ಮಾತನಾಡಿ, ಹಡಪದ ಅಪ್ಪಣ್ಣ ಭಕ್ತಿ ಭಂಡಾರಿ ಬಸವಣ್ಣನವರ ಬಲಗೈ ಭಂಟ ಹಾಗೂ ಅನುಯಾಯಿಯಾಗಿದ್ದರು. ಅಂದಿನ ಕಾಲದಲ್ಲಿಯೇ ಸುಮಾರು 250ಕ್ಕಿಂತ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಮೂಢನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಬಹಳ ಶ್ರಮಿಸಿದ್ದಾರೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್ ಮಾತನಾಡಿ, ಹಡಪದ ಅಪ್ಪಣ್ಣನವರು ಬಸವಣ್ಣನವರು ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಬಹಳ ದಕ್ಷತೆ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಈ ನಿಷ್ಠೆ, ಕೆಲಸದಲ್ಲಿನ ದಕ್ಷತೆ ಹಾಗೂ ಅವರ ನಡೆ- ನುಡಿಗಳನ್ನು ಇಂದಿನ ಸಮಾಜವು ಅನುಸರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ 2024 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸವಿತಾ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿ ಗೀತಾ ಹರೀಶ್, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ರಾಜಣ್ಣ ಇತರರಿದ್ದರು.