ಕಲುಷಿತ ನೀರು ಸೇವಿಸಿ ವ್ಯಕ್ತಿ ಸಾವು, ಐವರು ಆಸ್ಪತ್ರೆಗೆ

| Published : Jun 25 2024, 12:30 AM IST

ಕಲುಷಿತ ನೀರು ಸೇವಿಸಿ ವ್ಯಕ್ತಿ ಸಾವು, ಐವರು ಆಸ್ಪತ್ರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಾಯತಿ ವತಿಯಿಂದ ಮನೆ ಮನೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್‌ ಅನ್ನು ಚರಂಡಿ ಒಳಗಡೆ ಅಳವಡಿಸಲಾಗಿದೆ. ಇದರಿಂದ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಪಂಚಾಯಿತಿ ವತಿಯಿಂದ ಸರಬರಾಜು ಮಾಡಿದ್ದು ಎನ್ನಲಾದ ಕಲುಷಿತ ನೀರು ಸೇವಿಸಿ ವ್ಯಕ್ತಿ ಮೃತಪಟ್ಟ ಘಟನೆ ಮುಳಬಾಗಿಲಿನಲ್ಲಿ ಸೋಮವಾರ ನಡೆದಿದೆ. ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿಯ ವೆಂಕಟರಮಣಪ್ಪ(೬೦) ಮನೆಯಲ್ಲೇ ಮೃತಪಟ್ಟಿದ್ದು, ಐದು ಮಂದಿ ಅಸ್ವಸ್ಥಗೊಂಡಿದ್ದಾರೆ. ಇವರನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.

ನೀರು ಸೇವಿಸಿ ಸಾವು: ಆರೋಪ

ಪಂಚಾಯಿ ವತಿಯಿಂದ ಮನೆ ಮನೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್‌ ಅನ್ನು ಚರಂಡಿ ಒಳಗಡೆ ಅಳವಡಿಸಲಾಗಿದೆ. ಇದರಿಂದ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಿದೆ ಎನ್ನಲಾಗಿದೆ. ಇದೇ ನೀರನ್ನು ಕುಡಿದು ವ್ಯಕ್ತಿ ಸತ್ತಿರುವುದಾಗಿ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಇದೇ ನೀರನ್ನು ಸೇವಿಸಿರುವ ಗ್ರಾಮದ ಇತರ ೫ ಮಂದಿ ಅಸ್ವಸ್ಥಗೊಂಡಿದ್ದಾರೆ.

ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮಿಣಜೇನಹಳ್ಳಿಯಲ್ಲಿ ಮನೆಮನೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಅನ್ನು ಸರಿಪಡಿಸುವಂತೆ ಗ್ರಾಮಸ್ಥರು ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಎಡವಟ್ಟಿನಿಂದ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ

ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರಲ್ಲಿ ರಾಜಮ್ಮ, ವೆಂಕಟರಾಮಪ್ಪ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಗ್ರಾಮಕ್ಕೆ ಡಿಎಚ್‌ಒ ಡಾ.ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರ ಬೆಳಗ್ಗೆ ನೀರು ಸೇವಿಸಿದ ಬಳಿಕ ವೆಂಕಟವರಣಪ್ಪ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೋಲೀಸರು ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲುಷಿತ ನೀರಿನಿಂದ ಅನಾರೋಗ್ಯ

ಪಂಚಾಯಿತಿಯಿಂದ ನೀರು ಸರಬರಾಜು ಮಾಡುವ ಪೈಪ್ ಲೈನ್ ಮೂಲಕ ಬರುವ ನೀರನ್ನು ಅಡುಗೆಗೆ ಬಳಸಿಕೊಳ್ಳಲಾಗುತ್ತಿದೆ. ನೀರು ಕಲುಷಿತಗೊಂಡಿರುವ ಕಾರಣಕ್ಕೆ ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಗ್ರಾಮಸ್ಥ ಬಾಲಕೃಷ್ಣ ಅವರು ಮಾತನಾಡಿ, ೧೮೦ ಮನೆಗಳನ್ನು ಒಳಗೊಂಡಿರುವ ಗ್ರಾಮವಾಗಿದ್ದು, ಪ್ರತಿ ಮನೆಯಲ್ಲಿ ಇದೇ ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ ಮನೆಮನೆಗೆ ಅಳವಡಿಸಿರುವ ಪೈಲ್ ಲೈನ್ ಚರಂಡಿಯಲ್ಲಿ ಅಳವಡಿಸಿರುವ ಕಾರಣ ನೀರು ಕಲುಷಿತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.