ಸಾರಾಂಶ
ಹರಪನಹಳ್ಳಿ: ಜೀವನದ ಸತ್ಯವನ್ನು ಇದ್ದಂತೆ ಅರಿಯಬೇಕು ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀ ತಿಳಿಸಿದ್ದಾರೆ.
ಅವರು ತಾಲೂಕಿನ ಅರಸೀಕೆರೆ ಕೋಲಶಾಂತೇಶ್ವರಮಠದಲ್ಲಿ ದಾಸೋಹ ಮಂಟಪ ಉದ್ಘಾಟಿಸಿ ಭಾನುವಾರ ಮಾತನಾಡಿದರು.ಇರುವುದು ಒಂದು ತಿಳಿದುಕೊಳ್ಳುವುದು ಒಂದಾದರೆ ಅದಕ್ಕೆ ಬ್ರಾಂತಿ ಎನ್ನುತ್ತಾರೆ. 12ನೇ ಶತಮಾನದ ಶರಣರು ಜೀವನವನ್ನು ಇರುವಂತೆ ಸ್ವೀಕರಿಸಿದ್ದರು ಎಂದು ನುಡಿದರು.
ಜೀವನ ಸಾರ್ಥಕವಾಗಲು ಬೇಡಿ ಬದುಕಬೇಡಿ. ದುಡಿದು ಬದುಕಬೇಕು. ಮನುಷ್ಯ ಕಾಯಕ ಜೀವಿ. ದಾಸೋಹಿ ಜೀವಿಯಾಗಬೇಕು. ಅರಸೀಕೆರೆ ಮಠದಲ್ಲಿನ ಕಲ್ಲಿನ ಕಟ್ಟಡ ನೋಡಿದರೆ ಹಂಪಿ ನಿರ್ಮಾಣವಾದಂತೆ ಭಾಸವಾಗುತ್ತದೆ. ಕೋಲಶಾಂತೇಶ್ವರ ಶ್ರೀ ಬದುಕುವ ರೀತಿ, ಪ್ರಜ್ಞೆ, ಜಾಗೃತಿಯನ್ನು ವಿವಿಧ ಮಠಾಧೀಶರಿಂದ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ.ಗುರುಸಿದ್ದರಾಜಯೋಗೀಂದ್ರ ಶ್ರೀ ಮಹಾದ್ವಾರ ಉದ್ಘಾಟಿಸಿ ಮಾತನಾಡಿ, ಮಠಗಳು ಇಂದು ತಾಂತ್ರಿಕ, ವೈದ್ಯಕೀಯ, ಆರೋಗ್ಯ, ಸಾಹಿತ್ಯದ ಸೇವೆ ಮಾಡುತ್ತಾ ಬಂದಿವೆ. ಇಲ್ಲಿಯ ಕೋಲಶಾಂತೇಶ್ವರ ಶ್ರೀ ಕೃಷಿ ಪ್ರಧಾನವಾಗಿಟ್ಟುಕೊಂಡು ಮಠದ ಭೌತಿಕ ಅಭಿವೃದ್ಧಿ ಮಾಡಿದ್ದಾರೆ. ಶ್ರಮ ಸಂಸ್ಕೃತಿ ಇವರದು. ಒಟ್ಟಿನಲ್ಲಿ ರೈತರಿಗೆ ಆದರ್ಶಪ್ರಾಯವಾಗಿದ್ದಾರೆ ಇಲ್ಲಿಯ ಶ್ರೀ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಸುಖ ದುಃಖ ಮೀರಿ ಬೆಳೆಯಲು ಇಂತಹ ಕಾರ್ಯಕ್ರಮಗಳಲ್ಲಿ ತೇಜಸ್ಸು ಬರುತ್ತದೆ. ಕೋಲಶಾಂತೇಶ್ವರ ಶ್ರೀ ನೇಗಿಲ ಯೋಗಿ, ಕಾಯಕಯೋಗಿ. ಮಠಗಳಿಗೆ ಭಕ್ತ ಮತ್ತು ಸ್ವಾಮಿಗಳ ಬಾಂಧವ್ಯ ಅಷ್ಟೇ ಇರಬೇಕು ಎಂದರು.ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ಮಾತನಾಡಿ, ಕಾಯಕ, ದಾಸೋಹ ಎಂಬ ಅಭೂತಪೂರ್ವ ತತ್ವ, ಜ್ಞಾನವನ್ನು ಬಸವಾದಿ ಶರಣರು ನೀಡಿದ್ದಾರೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಪಾಂಡೊಮಟ್ಟಿ -ಕಮ್ಮತ್ತಹಳ್ಳಿ ಗುರುಬಸವ ಶ್ರೀ ಮಾತನಾಡಿದರು.
ಗದಗ -ಡಂಬಳದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಶಿವಮೊಗ್ಗದ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಕೋಲಶಾಂತೇಶ್ವರ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ, ಕೂಲಹಳ್ಳಿ ಚಿನ್ಮಯ ಸ್ವಾಮೀಜಿ, ಮಾಜಿ ಸಂಸದ ವೈ.ದೇವೇಂದ್ರಪ್ಪ, ಬೆಳಗಾವಿ ಅಬಕಾರಿ ಅಪರ ಆಯುಕ್ತ ವೈ.ಡಿ. ಮಂಜುನಾಥ, ಬಿಡಿಸಿಸಿ ಬ್ಯಾಂಕ ನಿರ್ದೆಶಕ ವೈ.ಡಿ. ಅಣ್ಣಪ್ಪ, ಹೊಸಕೋಟೆ ನಾಗರಾಜ, ಅಕ್ಷರ ಸೀಡ್ಸ್‌ನ ಎನ್.ಕೊಟ್ರೇಶ, ಲಕ್ಷ್ಮಮ್ಮ ಮಂಜುನಾಥ, ಕೆ.ಲಕ್ಷ್ಮಮ್ಮ ಮಹಂತೇಶ ಇತರರು ಉಪಸ್ಥಿತರಿದ್ದರು.